ಕೋಮು ದಳ್ಳುರಿಗೆ ತುತ್ತಾಗಿರುವ ಬಂಟ್ವಾಳಕ್ಕೆ ಬೇಕಿದೆ ಕಿಮ್ಮನೆ ರತ್ನಾಕರ್ ಮಾಸ್ಟರ್ ಪ್ಲಾನ್!

Update: 2017-07-11 08:20 GMT

ಬಂಟ್ವಾಳ, ಜು.11: ಮೂರು ವರ್ಷಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಂದಿತಾ ಎಂಬ ವಿದ್ಯಾರ್ಥಿನಿಯ ಸಾವು ಹಾಗೂ ಪಿಎಫ್‌ಐ ರ್ಯಾಲಿ ಸಂದರ್ಭದಲ್ಲಿ ನಡೆದ ಕೋಮು ಘರ್ಷಣೆಯನ್ನು ಹತೋಟಿಗೆ ತರಲು ಅಂದಿನ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಮಾಡಿದ್ದ ಮಾಸ್ಟರ್ ಪ್ಲಾನ್ ಸದ್ಯ ಬಂಟ್ವಾಳ ತಾಲೂಕಿಗೆ ಪ್ರಸ್ತುತ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

2014ರ ನವೆಂಬರ್ 4ರಂದು ತೀರ್ಥಹಳ್ಳಿಯಲ್ಲಿ ವಿದ್ಯಾರ್ಥಿನಿ ನಂದಿತಾ ನಿಗೂಢವಾಗಿ ಸಾವನಪ್ಪಿದ್ದಳು. ಪ್ರಕರಣದ ತನಿಖೆ ನಡೆಸಿದ ಸಿಐಡಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದ ನಂದಿತಾಳನ್ನು ಎಂಟನೆ ತರಗತಿಗೆ ಆಂಗ್ಲ ಮಾಧ್ಯಮಕ್ಕೆ ಸೇರಿಸಿದ್ದರಿಂದ ಕಲಿಕೆಯಲ್ಲಿ ಹಿಂದುಳಿದ ಹಿನ್ನೆಲೆಯಲ್ಲಿ ಮನನೊಂದು ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ವರದಿ ನೀಡಿತ್ತು. ಆದರೆ ಇದಕ್ಕೂ ಮೊದಲು ನಂದಿತಾಳನ್ನು ಆತಳ ಸ್ನೇಹಿತ ಮುಸ್ಲಿಮ್ ಯುವಕ ಕೊಲೆ ಮಾಡಿದ್ದಾನೆ ಎಂದು ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಸುಳ್ಳು ಸುದ್ದಿ ಹಬ್ಬಿಸಿದ್ದರು. ಅಲ್ಲದೇ ನಿಷೇಧಾಜ್ಞೆಯ ನಡುವೆಯೂ ಪ್ರತಿಭಟನೆ ಮಾಡಿದ್ದರು. ಇದರಿಂದ ತೀರ್ಥಹಳ್ಳಿ ತಾಲೂಕಿನಲ್ಲಿ ಉದ್ವಿಗ್ನದ ವಾತಾವರಣ ಸೃಷ್ಟಿಯಾಗಿತ್ತು. ಪರಿಣಾಮ ಇಡೀ ಜಿಲ್ಲೆಯೇ ಕೋಮು ಘರ್ಷಣೆ ಒಳಗಾಗಿ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿಯಾಗಿತ್ತು. ವಾರ ಕಳೆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರಲಿಲ್ಲ.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಮಾಡಿದ್ದ ಮಾಸ್ಟರ್ ಪ್ಲಾನ್ ಕೆಲವೇ ದಿನಗಳಲ್ಲಿ ಇಡೀ ಜಿಲ್ಲೆಯಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಅದೇನೆಂದರೆ ತೀರ್ಥಹಳ್ಳಿ ತಾಲೂಕಿನಲ್ಲಿ ಕರ್ತವ್ಯದಲ್ಲಿದ್ದ ಎಲ್ಲ ಪೊಲೀಸ್ ಅಧಿಕಾರಿಗಳನ್ನು ತಟಸ್ಥಗೊಳಿಸಿದ್ದರು. ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕರೆಸಿ ಭದ್ರತೆಯ ಉಸ್ತುವಾರಿಯನ್ನು ಅವರಿಗೆ ವಹಿಸಲಾಗಿತ್ತು. ಅಲ್ಲದೆ ಬೆಂಗಳೂರಿನಿಂದ ಉನ್ನತ ಪೊಲೀಸ್ ಅಧಿಕಾರಿಗಳನ್ನು ತೀರ್ಥಹಳ್ಳಿಗೆ ಕರೆಸಿ ಶಾಂತಿ ಮರುಸ್ಥಾಪನೆಯಾಗುವವರೆಗೆ ಜಿಲ್ಲೆಯಲ್ಲೇ ಮೊಕ್ಕಂ ಹೂಡುವಂತೆ ಮಾಡಿದ್ದರು.

ಅವರ ಈ ಕ್ರಮದ ವಿರುದ್ಧ ವಿಪಕ್ಷ ಬಿಜೆಪಿ ಸೇರಿದಂತೆ ಕೆಲವರಿಂದ ಟೀಕೆ, ಟಿಪ್ಪಣಿಗಳು ಆರೋಪಗಳು ವ್ಯಕ್ತವಾದರೂ ಕ್ಯಾರೇ ಮಾಡದ ಕಿಮ್ಮನೆ ರತ್ನಾಕರ್ ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರತೀದಿನವೂ ಪೊಲೀಸರ ಸಭೆ ನಡೆಸಿ ವರದಿ ಪಡೆಯುತ್ತಿದ್ದರು. ಕೋಮು ಘರ್ಷಣೆಯಿಂದ ಉರಿಯುತ್ತಿದ್ದ ಶಿವಮೊಗ್ಗ ಜಿಲ್ಲೆ ಕೆಲವೇ ದಿನಗಳಲ್ಲಿ ಹತೋಟಿಗೆ ಬಂದಿತ್ತು. ಸಚಿವರ ಈ ಉಪಾಯ ಫಲ ನೀಡಿತ್ತು. ಸಾರ್ವಜನಿಕ ವಲಯದಿಂದ ಅವರು ಪ್ರಶಂಸೆಗೊಳಗಾಗಿದ್ದರು.

ನಂದಿತಾ ಪ್ರಕರಣ ಮುಗಿದ ಬೆನ್ನಿಗೆ 2015ರ ಫೆಬ್ರವರಿ 7ರಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಶಿವಮೊಗ್ಗದಲ್ಲಿ ಹಮ್ಮಿಕೊಂಡಿದ್ದ ಸಂಸ್ಥಾಪನಾ ರ್ಯಾಲಿಗೆ ದುಷ್ಕರ್ಮಿಗಳು ತೆಂಗಿನಕಾಯಿ ಎಸೆದು ಜಿಲ್ಲೆಯ ಶಾಂತಿ ಕದಡಿದ್ದರು. ಬಳಿಕ ಇಡೀ ಶಿವಮೊಗ್ಗ ಜಿಲ್ಲೆ ಕೋಮು ದಳ್ಳೂರಿಗೆ ತುತ್ತಾಗಿತ್ತು. ಹಲವು ಅಂಗಡಿ ಮುಂಗಟ್ಟು ಗಳು ಬೆಂಕಿಗಾಹುತಿಯಾಗಿದ್ದವು. ಆ ಸಮಯದಲ್ಲೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ಮತ್ತದೇ ನಿವೃತ್ತ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ವಾರದೊಳಗೆ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು. 

ಮೇ 26ರಂದು ಕಲ್ಲಡ್ಕದಲ್ಲಿ ಯುವಕನೋರ್ವನಿಗೆ ಚೂರಿ ಇರಿದ ಘಟನೆಯ ಬಳಿಕ 46 ದಿನಗಳಿಂದ ತಾಲೂಕಿನಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕೊಲೆ, ಕೊಲೆಯತ್ನ, ಹಲ್ಲೆ, ಕಲ್ಲು ತೂರಾಟ, ದಾಂಧಲೆ ಪ್ರಕರಣಗಳು ಮರುಕಳಿಸುತ್ತಲೇ ಇವೆ. ರಾಜಕೀಯ ಪ್ರಭಾವ, ಕತ್ಯರ್ವ ಲೋಪ, ನಿರ್ಲಕ್ಷದಿಂದಾಗಿ ಸ್ಥಳೀಯ ಪೊಲೀಸರಿಗೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ ಎಂದ ಆರೋಪವೂ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಂಟ್ವಾಳ ತಾಲೂಕಿನಲ್ಲಿ ಕಿಮ್ಮನೆ ರತ್ನಾಕರ್ ಅವರ ಈ ‘ಮಾಸ್ಟರ್ ಪ್ಲಾನ್’ ರೀತಿಯಲ್ಲೇ ಕ್ರಮಕ್ಕೆ ಸರಕಾರ ಮುಂದಾದಲ್ಲಿ ಉತ್ತಮ ಫಲಿತಾಂಶ ಸಿಕ್ಕೀತು ಎಂಬ ಆಶಾಭಾವ ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News