×
Ad

ಮೊಸುಲ್‌ನಲ್ಲಿ ಸಂಪೂರ್ಣ ವಿಜಯ: ಇರಾಕ್ ಪ್ರಧಾನಿ ಘೋಷಣೆ

Update: 2017-07-11 19:13 IST

ಮೊಸುಲ್, ಜು. 11: ಮೊಸುಲ್‌ನಲ್ಲಿ ಐಸಿಸ್ ಭಯೋತ್ಪಾದಕ ಗುಂಪಿನ ವಿರುದ್ಧ ‘ಸಂಪೂರ್ಣ ವಿಜಯ’ ಗಳಿಸಿರುವುದಾಗಿ ಇರಾಕ್ ಸೋಮವಾರ ಘೋಷಿಸಿದೆ.

ಇರಾಕ್‌ನ ಎರಡನೆ ಅತಿ ದೊಡ್ಡ ನಗರವನ್ನು ‘ಖಲೀಫಶಾಹಿ’ಯ ಜಾಗತಿಕ ರಾಜಧಾನಿಯನ್ನಾಗಿ ಮಾಡಲು ಹೊರಟಿದ್ದ ಐಸಿಸ್‌ನಿಂದ, ನಗರದ ನಿಯಂತ್ರಣವನ್ನು ಮರುವಶಪಡಿಸಿಕೊಳ್ಳುವಲ್ಲಿ ಇರಾಕ್ ಸೇನೆ ಯಶಸ್ವಿಯಾಗಿದೆ.

‘‘ಕಳೆದ ಮೂರು ವರ್ಷಗಳಿಂದ ಉಗ್ರರು ಮತ್ತು ಇರಾಕಿಗಳ ನಡುವೆ ನಡೆಯುತ್ತಿದ್ದ ಸಮರಕ್ಕೆ ಪೂರ್ಣ ವಿರಾಮ ಬಿದ್ದ ಶ್ರೇಷ್ಠ ದಿನ ಇದಾಗಿದೆ’’ ಎಂದು ಪ್ರಧಾನಿ ಹೈದರ್ ಅಲ್-ಅಬಾದಿ ಮೊಸುಲ್ ಹಳೆ ನಗರದ ತುದಿಯಲ್ಲಿರುವ ಸಣ್ಣ ನೆಲೆಯಲ್ಲಿ ಹೇಳಿದರು. ಅವರೊಂದಿಗೆ ಹಿರಿಯ ಸೇನಾಧಿಕಾರಿಗಳು ಇದ್ದರು.

ಇದು ಐಸಿಸ್ ವಿರುದ್ಧ ಈವರೆಗೆ ನಡೆದ ಯುದ್ಧದಲ್ಲೇ ಅತ್ಯಂತ ಸುದೀರ್ಘವಾದುದಾಗಿದೆ.

‘‘ನಮ್ಮ ಹುತಾತ್ಮರ ರಕ್ತದಿಂದಾಗಿ ಈ ವಿಜಯ ಸಾಧ್ಯವಾಯಿತು’’ ಎಂದರು.

ಈ ನಗರವು 2014ರಲ್ಲಿ ಕೆಲವೇ ದಿನಗಳ ಸಂಘರ್ಷದ ಬಳಿಕ ಐಸಿಸ್ ಪಾಲಾಗಿತ್ತು. ಆದರೆ, ಮೊಸುಲನ್ನು ಮತ್ತೆ ವಶಪಡಿಸಿಕೊಳ್ಳುವ ಹೋರಾಟ ಸುಮಾರು ಒಂಬತ್ತು ತಿಂಗಳ ಕಾಲ ನಡೆದಿದೆ.

ಆದರೆ, ಈ ವಿನಾಶಕಾರಿ ಯುದ್ಧದಲ್ಲಿ ಸಾವಿರಾರು ಮಂದಿ ಮೃತಪಟ್ಟಿದ್ದಾರೆ, ಇಡೀ ಉಪನಗರಗಳೇ ಹಾಳುಬಿದ್ದಿವೆ ಮತ್ತು ಸುಮಾರು 9 ಲಕ್ಷ ಮಂದಿ ನಿರ್ವಸಿತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News