×
Ad

ಜೀವಿಗಳ ಸಾಮೂಹಿಕ ವಿನಾಶದ ಆರಂಭ: ಅಧ್ಯಯನ ಎಚ್ಚರಿಕೆ

Update: 2017-07-11 20:34 IST

ಪ್ಯಾರಿಸ್, ಜು. 11: ಭೂಮಿಯ ಮೇಲಿನ ಜೀವಿಗಳ ಸಾಮೂಹಿಕ ವಿನಾಶದ ಆರನೆ ಅಧ್ಯಾಯ ಈ ಹಿಂದೆ ಭಾವಿಸಿರುವುದಕ್ಕಿಂತಲೂ ಹೆಚ್ಚು ವೇಗವಾಗಿ ಆರಂಭಗೊಂಡಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಬೆನ್ನೆಲುಬು ಇರುವ ಪ್ರಾಣಿಗಳ ಪೈಕಿ 30 ಶೇಕಡಕ್ಕಿಂತಲೂ ಹೆಚ್ಚು (ಮೀನುಗಳು, ಹಕ್ಕಿಗಳು, ಉಭಯವಾಸಿಗಳು, ಸರೀಸೃಪಗಳು ಮತ್ತು ಸಸ್ತನಿಗಳು) ವಿನಾಶದ ಅಂಚಿನಲ್ಲಿವೆ ಎಂದು ಮೊದಲ ಜಾಗತಿಕ ವಿಶ್ಲೇಷಣೆ ಹೇಳಿದೆ.

‘‘ಇದು ಜಾಗತಿಕವಾಗಿ ನಡೆಯುತ್ತಿರುವ ಜೈವಿಕ ವಿನಾಶವಾಗಿದೆ’’ ಎಂದು ‘ಪಿಎನ್‌ಎಎಸ್’ ಪತ್ರಿಕೆಯಲ್ಲಿ ಪ್ರಕಟಗೊಂಡ ಅಧ್ಯಯನದ ಸಹ ಲೇಖಕ ಹಾಗೂ ಸ್ಟಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ರುಡಾಲ್ಫೊ ಡಿರ್ಝೊ ಹೇಳಿದ್ದಾರೆ.

ಸಸ್ತನಿಗಳು ತಮ್ಮ ಮೂಲ ವಾಸ ಸ್ಥಾನದ ಕನಿಷ್ಠ ಮೂರನೆ ಒಂದು ಭಾಗವನ್ನು ಕಳೆದುಕೊಂಡಿವೆ ಎಂಬುದನ್ನು ಅಧ್ಯಯನ ಕಂಡುಕೊಂಡಿದೆ.

ಖಡ್ಗಮೃಗಗಳು, ಒರಂಗುಟಾನ್‌ಗಳು, ಗೊರಿಲ್ಲಾಗಳು ಹಾಗೂ ಹುಲಿ, ಚಿರತೆ, ಸಿಂಹ ಮುಂತಾದ ದೊಡ್ಡ ಬೆಕ್ಕುಗಳು ಸೇರಿದಂತೆ, ಸಸ್ತನಿಗಳ ಪೈಕಿ 40 ಶೇಕಡದಷ್ಟು ಪ್ರಾಣಿಗಳು ತಾವು ಮೊದಲು ಓಡಾಡಿದ್ದ ಜಾಗದ 20 ಶೇಕಡ ಅಥವಾ ಅದಕ್ಕಿಂತಲೂ ಕಡಿಮೆ ಜಾಗದಲ್ಲಿ ಈತ ವಾಸಿಸುತ್ತಿವೆ.

ಜೀವವೈವಿಧ್ಯದ ನಾಶ ದರವು ಇತ್ತೀಚೆಗೆ ಹೆಚ್ಚುತ್ತಿದೆ ಎಂದು ಅಧ್ಯಯನ ಹೇಳಿದೆ.

 ‘‘ಒಂದು ಅಥವಾ ಎರಡು ದಶಕಗಳ ಹಿಂದೆ ಸುರಕ್ಷಿತ ಎಂಬುದಾಗಿ ಭಾವಿಸಲಾಗಿದ್ದ ಹಲವಾರು ಸಸ್ತನಿ ಪ್ರಭೇಧಗಳು ಈಗ ಅಪಾಯದಂಚಿನಲ್ಲಿವೆ’’ ಎಂದು ಅಧ್ಯಯನ ಹೇಳುತ್ತದೆ. ಇದರಲ್ಲಿ ಚಿರತೆಗಳು, ಸಿಂಹಗಳು ಮತ್ತು ಜಿರಾಫೆಗಳು ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News