2ನೆ ಮಹಾಯುದ್ದ ಕಾಲದ ‘ಟೈಪ್‌ರೈಟರ್’ 33.23 ಲಕ್ಷ ರೂ.ಗೆ ಹರಾಜು
ಬುಖಾರೆಸ್ಟ್ (ರೊಮೇನಿಯ), ಜು. 12: ರೊಮೇನಿಯದಲ್ಲಿ ಹಳೆಯ ಟೈಪ್‌ರೈಟರೊಂದು 45,000 ಯುರೋ (33.23 ಲಕ್ಷ ರೂಪಾಯಿ) ಬೆಲೆಗೆ ಮಾರಾಟವಾಗಿದೆ.
ಖರೀದಿದಾರನು ಈ ಟೈಪ್‌ರೈಟರನ್ನು ಬುಖಾರೆಸ್ಟ್‌ನ ಗುಜರಿ ಮಾರುಕಟ್ಟೆಯಿಂದ 100 ಯುರೋ (7385 ರೂಪಾಯಿ) ಕೊಟ್ಟು ಖರೀದಿಸಿದ್ದರು. ಬಳಿಕ ಅದನ್ನು ಬುಖಾರೆಸ್ಟ್‌ನ ಹರಾಜು ಮಳಿಗೆ ‘ಆರ್ಟ್‌ಮಾರ್ಕ್’ನಲ್ಲಿ ಹರಾಜಿಗಿಟ್ಟರು. ಹರಾಜಿನ ಆರಂಭಿಕ ಬೆಲೆ 9,000 ಯುರೋ (6.65 ಲಕ್ಷ ರೂಪಾಯಿ) ಆಗಿತ್ತು.
ಮಂಗಳವಾರ, ‘ಆರ್ಟ್‌ಮಾರ್ಕ್’ ಈ ಟೈಪ್‌ರೈಟರನ್ನು 45,000 ಯುರೋ ಬಿಡ್ ಸಲ್ಲಿಸಿದ ವ್ಯಕ್ತಿಗೆ ಮಾರಾಟ ಮಾಡಿತು.
ಹಾಗಾದರೆ, ಈ ಟೈಪ್‌ರೈಟರ್‌ನಲ್ಲಿ ಅಂಥಾದ್ದೇನಿದೆಯಪ್ಪಾ?
ವಾಸ್ತವವಾಗಿ, ಅದು ಜರ್ಮನಿಯ ‘ವೆಹ್ರಮಾಕ್ಟ್ ಎನಿಗ್ಮ’ ಯಂತ್ರವಾಗಿತ್ತು. ಅದನ್ನು ಎರಡನೆ ಮಹಾಯುದ್ಧ ಕಾಲದಲ್ಲಿ ಸಾಮಾನ್ಯ ಭಾಷೆಯನ್ನು ಸಾಂಕೇತಿಕ ಭಾಷೆಗೆ ಹಾಗೂ ಸಾಂಕೇತಿಕ ಭಾಷೆಯನ್ನು ಸಾಮಾನ್ಯ ಭಾಷೆಗೆ ತರ್ಜುಮೆ ಮಾಡಲು ಬಳಸಲಾಗಿತ್ತು.
‘‘ಗುಜರಿ ಮಾರುಕಟ್ಟೆಯಿಂದ ಇದನ್ನು ಖರೀದಿಸಿದವರು ಸಾಂಕೇತಿಕ ಭಾಷೆಯ ಪ್ರೊಫೆಸರ್. ತಾನು ಏನನ್ನು ಖರೀದಿಸುತ್ತಿದ್ದೇನೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿತ್ತು’’ ಎಂದು ‘ಆರ್ಟ್‌ಮಾರ್ಕ್’ನ ಸರಕು ನಿರ್ವಾಹಕ ಕ್ರಿಸ್ಟಿಯಾನ್ ಗವ್ರಿಲ ‘ರಾಯ್ಟರ್ಸ್’ಗೆ ಹೇಳಿದರು.
ರೊಮೇನಿಯ 1944ರವರೆಗೆ ನಾಝಿ ಜರ್ಮನಿಯ ಮಿತ್ರ ದೇಶವಾಗಿತ್ತು. ಆ ವರ್ಷ ಅದು ಜರ್ಮನಿಯನ್ನು ತೊರೆದು ಅಮೆರಿಕ ನೇತೃತ್ವದ ಮಿತ್ರಪಡೆಗಳ ಸಾಲಿಗೆ ಸೇರಿತು.
ಎನಿಗ್ಮ ಯಂತ್ರವನ್ನೂ ಸೋಲಿಸಿದ್ದ ಬ್ರಿಟಿಶ್ ಗಣಿತಜ್ಞ!
ನಾಝಿ ಸೇನೆಯ ವಿವಿಧ ಶಾಖೆಗಳು ಕಳುಹಿಸುವ ಸಂಕೇತ ಭಾಷೆಯ ಸಂದೇಶಗಳನ್ನು ಬಿಡಿಸಲು ಹಾಗೂ ಸಾಂಕೇತಿಕ ಭಾಷೆಗೆ ಪರಿವರ್ತಿಸಲು ಎನಿಗ್ಮ ಯಂತ್ರವನ್ನು ಬಳಸಲಾಗುತ್ತಿತ್ತು.
ಆದರೆ, ಬ್ರಿಟನ್‌ನ ಯುದ್ಧ ಕಾಲದ ಸಂಕೇತಾಕ್ಷರಗಳನ್ನು ಬಿಡಿಸುವ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಬ್ರಿಟಿಶ್ ಗಣಿತಜ್ಞ ಅಲನ್ ಟ್ಯೂರಿಂಗ್ ಮತ್ತು ಅವರ ತಂಡ ಈ ಸಂಕೇತಗಳನ್ನು ಬಿಡಿಸುವಲ್ಲಿ ಯಶಸ್ವಿಯಾಗಿತ್ತು.
ಒಂದು ಅಂದಾಜಿನ ಪ್ರಕಾರ, ಅವರ ಕೆಲಸವು ಎರಡನೆ ಮಹಾಯುದ್ಧವನ್ನು ಎರಡು ವರ್ಷಗಳಷ್ಟು ಕಡಿಮೆ ಮಾಡಿತು.