×
Ad

ಟ್ರಂಪ್-ರಶ್ಯ ನಂಟನ್ನು ಸಾಬೀತುಪಡಿಸಿದ ಜೂ. ಟ್ರಂಪ್‌ರ ಇಮೇಲ್‌ಗಳು

Update: 2017-07-12 20:27 IST

ವಾಶಿಂಗ್ಟನ್, ಜು. 12: 2016ರ ಅಧ್ಯಕ್ಷೀಯ ಚುನಾವಣೆಯ ವೇಳೆ ಟ್ರಂಪ್ ಪ್ರಚಾರ ತಂಡ ಮತ್ತು ರಶ್ಯದ ನಡುವೆ ನಂಟಿತ್ತೆ ಎಂಬ ಬಗ್ಗೆ ವಿಶೇಷ ವಕೀಲರು ಮತ್ತು ಕಾಂಗ್ರೆಸ್ ನಡೆಸುತ್ತಿರುವ ತನಿಖೆಗಳು ಡೊನಾಲ್ಡ್ ಟ್ರಂಪ್ ಸರಕಾರದ ಮೇಲೆ ಕರಿನೆರಳನ್ನು ಬೀರಿವೆ.

ಇದು ‘ಸುಳ್ಳು ಸುದ್ದಿ’ ಎಂಬುದಾಗಿ ಟ್ರಂಪ್ ಎಂದಿನ ಧಾಟಿಯಲ್ಲಿ ಪದೇ ಪದೇ ಹೇಳುತ್ತಿದ್ದಾರೆ. ಆದರೆ, ತನಿಖೆಗಳಿಂದ ಅವರ ಮೇಲಿನ ಆರೋಪಗಳು ಗಟ್ಟಿಯಾಗುತ್ತಿವೆಯೇ ಹೊರತು ಕಡಿಮೆಯಾಗುತ್ತಿಲ್ಲ. ಅವರ ಪ್ರಮುಖ ಅನುಯಾಯಿಗಳು ಮತ್ತು ಸಂಬಂಧಿಗಳು ತನಿಖಾ ವ್ಯಾಪ್ತಿಗೆ ಹೆಚ್ಚು ಹೆಚ್ಚು ಒಳಪಡುತ್ತಿದ್ದಾರೆ.

ಟ್ರಂಪ್‌ರ ಹಿರಿಯ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್ ಮಂಗಳವಾರ ಟ್ವಿಟರ್‌ನಲ್ಲಿ ಸರಣಿ ಇಮೇಲ್ ಸಂದೇಶಗಳನ್ನು ಹಾಕಿದರು. ಎದುರಾಳಿ ಹಿಲರಿ ಕ್ಲಿಂಟನ್ ಕುರಿತ ಘಾತಕ ಮಾಹಿತಿಯನ್ನು ನೀಡುವ ಮೂಲಕ ಚುನಾವಣೆಯಲ್ಲಿ ಟ್ರಂಪ್‌ಗೆ ಸಹಾಯ ಮಾಡಲು ರಶ್ಯ ಪ್ರಯತ್ನಗಳನ್ನು ನಡೆಸುತ್ತಿದೆ ಎಂಬ ಮಾಹಿತಿಯನ್ನು ನೀಡುವ ಇಮೇಲ್ ಸಂದೇಶಗಳು ಅವು.

ಚುನಾವಣೆಯಲ್ಲಿ ಹಿಲರಿಗೆ ಹಿನ್ನಡೆ ಉಂಟು ಮಾಡಬಹುದಾದ ಮಾಹಿತಿಯನ್ನು ಪಡೆಯುವುದಕ್ಕಾಗಿ ರಶ್ಯದ ವಕೀಲರೊಬ್ಬರನ್ನು ಭೇಟಿ ಮಾಡಲು ಜೂನಿಯರ್ ಟ್ರಂಪ್ ಕಾಯುತ್ತಿದ್ದರು. ರಶ್ಯದ ಸಂಗೀತ ಪ್ರಚಾರಕರೊಬ್ಬರು ಈ ಭೇಟಿಯನ್ನು ಏರ್ಪಡಿಸಿದ್ದರು.

ರಶ್ಯದ ವಕೀಲರನ್ನು ಜೂ. ಟ್ರಂಪ್ ಭೇಟಿಯಾದರೂ, ತನಗೆ ಅದರ ಮಹತ್ವ ಗೊತ್ತಿರಲಿಲ್ಲ ಎಂದು ಅವರು ಹೇಳುತ್ತಾರೆ.

ಇಮೇಲ್‌ಗಳ ಬಿಡುಗಡೆಯ ಬಳಿಕ, ಅಧ್ಯಕ್ಷ ಟ್ರಂಪ್ ತನ್ನ ಮಗನಿಗೆ ಕ್ಲೀನ್‌ಚಿಟ್ ನೀಡಿದ್ದಾರೆ ಹಾಗೂ ತನ್ನ ಮಗ ಅತ್ಯುನ್ನತ ಗುಣಮಟ್ಟದ ವ್ಯಕ್ತಿ ಎಂಬ ಪ್ರಮಾಣಪತ್ರ ನೀಡಿದ್ದಾರೆ.

ರಶ್ಯ ಮತ್ತು ಟ್ರಂಪ್ ಪ್ರಚಾರದ ನಡುವಿನ ಸಂಭಾವ್ಯ ನಂಟಿನ ಬಗ್ಗೆ ಎಫ್‌ಬಿಐ ತನಿಖೆ ನಡೆಸುತ್ತಿದೆ.

ಎಫ್‌ಬಿಐ ನಿರ್ದೇಶಕ ಜೇಮ್ಸ್ ಕಾಮಿಯನ್ನು ಟ್ರಂಪ್ ಈಗಾಗಲೇ ಮೇ 9ರಂದು ಉಚ್ಚಾಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News