​ಜು.16: ಪಿಲಿಕುಳದ ಮತ್ಯೋತ್ಸವ ಮತ್ತು ಕ್ಷೇತ್ರೋತ್ಸವ

Update: 2017-07-13 10:21 GMT

ಮಂಗಳೂರು, ಜು.13: ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಲೇಕ್ ಗಾರ್ಡನ್‌ನಲ್ಲಿ ಮೀನುಗಾರಿಕಾ ಇಲಾಖೆ, ಮೀನುಗಾರಿಕಾ ಅಭಿವೃದ್ಧಿ ನಿಗಮ ಮತ್ತು ಪಿಲಿಕುಳ ನಿಸರ್ಗಧಾಮದ ಆಶ್ರಯದಲ್ಲಿ ಪಿಲಿಕುಳ ಮತ್ಯೋತ್ಸವ ಮತ್ತು ಕ್ಷೇತ್ರೋತ್ಸವ ಕಾರ್ಯಕ್ರಮವು ಜು.16ರಂದು ಬೆಳಗ್ಗೆ 11ಕ್ಕೆ ನಡೆಯಲಿದೆ.

ರಾಜ್ಯ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಕಾರ್ಯಕ್ರಮ ಉದ್ಘಾಟಿಸುವರು. ಈ ಸಂದರ್ಭ ಕೆರೆಗೆ ಮೀನು ಮರಿಗಳನ್ನು ಬಿಡುವ ಕಾರ್ಯಕ್ರಮವೂ ನೆರವೇರಲಿದೆ.

ಈ ಹಬ್ಬದ ಅಂಗವಾಗಿ ಪಿಲಿಕುಳದ ಲೇಕ್ ಗಾರ್ಡನ್‌ನ ಕೆರೆಯಲ್ಲಿ ಬೆಳೆಸಿದ ಕಾಟ್ಲಾ, ರೋಹು, ಸಾಮಾನ್ಯ ಗೆಂಡೆ ಹಾಗೂ ಇತರೆ ಮೀನುಗಳನ್ನು ಹಿಡಿದು ಸಾರ್ವಜನಿಕ ಹರಾಜು ಮಾಡಲಾಗುವುದು. ಅಲ್ಲದೆ ಮೀನುಗಾರಿಕಾ ಅಭಿವೃದ್ಧಿ ನಿಗಮದಿಂದ ಸಿಹಿ ನೀರಿನ ಮೀನುಗಳು, ಪಾಂಪ್ಲೆಟ್, ಅಂಜಲ್, ಬಂಗುಡೆ, ಸಿಗಡಿ, ಬೊಂಡಾಸು ಹಾಗೂ ಇನ್ನಿತರ ತಾಜಾ ಮೀನು ಮತ್ತು ಮೌಲ್ಯವರ್ಧಿತ ಮೀನು ಉತ್ಪನ್ನಗಳ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಅದಲ್ಲದೆ ತಾಜಾ ಸಮುದ್ರ ಮೀನುಗಳ ಫ್ರೈ, ಫಿಶ್ ಮಸಾಲಾ, ಫಿಶ್ ಕಬಾಬ್ ಹಾಗೂ ಇನ್ನಿತರ ಮೀನಿನ ಖಾದ್ಯಗಳನ್ನು ಶುಚಿ ರುಚಿಯಾಗಿ ಸ್ಥಳದಲ್ಲೇ ತಯಾರಿಸಿ ಮಾರಾಟ ಮಾಡಲಾಗುವುದು.

ವಿವಿಧ ರೀತಿಯ ಮೀನುಮರಿಗಳ ಮತ್ತು ಒಣ ಮೀನುಗಳ ಪ್ರದರ್ಶನ ಮತ್ತು ಮಾರಾಟ, ಮೀನುಗಾರಿಕಾ ಮಹಾವಿದ್ಯಾಲಯದಿಂದ ಮೀನುಗಾರಿಕೆ ಕುರಿತು ಅರಿವು ಮೂಡಿಸುವುದು ಮತ್ತು ಅಲಂಕಾರಿಕಾ ಮೀನುಗಳ ಪ್ರದರ್ಶನ ಮತ್ತು ಮಾರಾಟ ಕೂಡಾ ಇದೆ. ದಿನವಿಡೀ ನಡೆಯುವ ಈ ಕಾರ್ಯಕ್ರಮದಲ್ಲಿ ಮೀನುಗಾರಿಕಾ ಮಹಾವಿದ್ಯಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News