ನ್ಯಾಯಾಧೀಶರ ಹುದ್ದೆ ಭರ್ತಿ ಮಾಡದಿದ್ದರೆ ತಕ್ಕ ಕ್ರಮ : ಕೇಂದ್ರಕ್ಕೆ ಹೈಕೋರ್ಟ್ ಎಚ್ಚರಿಕೆ
ಹೊಸದಿಲ್ಲಿ, ಜು.13: ತ್ವರಿತವಾಗಿ ನ್ಯಾಯಾಧೀಶರ ನೇಮಕ ಪ್ರಕ್ರಿಯೆ ನಡೆಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೋಲ್ಕತಾ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದೆ.
ದೇಶದ ಅತ್ಯಂತ ಹಳೆಯದಾದ ಹೈಕೋರ್ಟ್ ಎನಿಸಿಕೊಂಡಿರುವ ಕೋಲ್ಕತಾ ಹೈಕೋರ್ಟ್‌ನಲ್ಲಿ ಮಂಜೂರಾದ ನ್ಯಾಯಾಧೀಶರ ಸಂಖ್ಯೆ 72 ಆಗಿದ್ದರೆ, ಈಗ ಕೇವಲ 34 ನ್ಯಾಯಾಧೀಶರಿದ್ದಾರೆ. ಈ ವರ್ಷಾಂತ್ಯ ಇವರಲ್ಲಿ 7 ನ್ಯಾಯಾಧೀಶರು ನಿವೃತ್ತಿಯಾಗಲಿದ್ದಾರೆ.
ನ್ಯಾಯಾಧೀಶರ ನೇಮಕಾತಿ ಕುರಿತು ಕೇಂದ್ರ ಸರಕಾರದ ಮೌನಧೋರಣೆ ಮುಂದುವರಿದಿದ್ದು ಇದು ಕಳವಳಕಾರಿಯಾಗಿದೆ. ಕೇಂದ್ರದ ಈ ನಡೆಯನ್ನು ನ್ಯಾಯಾಲಯದ ಕಾರ್ಯಭಾರದಲ್ಲಿ ನಡೆಸಿರುವ ಹಸ್ತಕ್ಷೇಪ ಎಂದು ಗಂಭೀರವಾಗಿ ಪರಿಗಣಿಸಲಾಗಿದ್ದು , ಸರಕಾರ ನ್ಯಾಯಾಧೀಶರನ್ನು ಶೀಘ್ರ ನೇಮಿಸದಿದ್ದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ದೇವಿಪ್ರಸಾದ್ ಡೆ ಅವರನ್ನೊಳಗೊಂಡ ನ್ಯಾಯಾಲಯ ಪೀಠವೊಂದು ನೀಡಿದ ಆದೇಶದಲ್ಲಿ ತಿಳಿಸಲಾಗಿದೆ. ಅಲ್ಲದೆ ಆದೇಶದ ಪ್ರತಿಯನ್ನು ಕೇಂದ್ರ ಕಾನೂನು ಸಚಿವರಿಗೆ ಕಳಿಸಬೇಕು. ಈ ಮೂಲಕ ಈ ನ್ಯಾಯಾಲಯದಲ್ಲಿ ನ್ಯಾಯಾಧೀಶರ ನೇಮಕ ಕುರಿತ ವಿಷಯಕ್ಕೆ ಹೆಚ್ಚಿನ ಆದ್ಯತೆ ದೊರೆಯಲಿ ಎಂದೂ ತಿಳಿಸಲಾಗಿದೆ. ರೂಪದರ್ಶಿ ಸೋನಿಕಾ ಚೌಹಾಣ್ ಸಾವಿನ ಪ್ರಕರಣದಲ್ಲಿ ಜಾಮೀನು ಕೋರಿ ನಟ ವಿಕ್ರಮ್ ಚಟರ್ಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಾಲಯದ ಪೀಠ ಈ ಆದೇಶ ನೀಡಿದೆ.
ಕೋಲ್ಕತಾ ಹೈಕೋರ್ಟ್ ಬಗ್ಗೆ ಕೇಂದ್ರವು ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿರುವ ನ್ಯಾಯಾಲಯ ಪೀಠವು, ಇದೀಗ ನಮ್ಮ ಮನಸ್ಸಿನಲ್ಲಿ ಇರುವುದನ್ನು ಹೇಳುವ ಕಾಲ ಬಂದಿದೆ. ಇಲ್ಲವಾದರೆ ಹಲವು ಎಡರು ತೊಡರಿನ ಮಧ್ಯೆಯೂ ತನ್ನ ಶ್ರೇಷ್ಠತೆಯನ್ನು ಉಳಿಸಿಕೊಂಡಿರುವ ನ್ಯಾಯಾಲಯವು ಕ್ರಮೇಣ ತನ್ನ ಪ್ರಭಾವವನ್ನು ಕಳೆದುಕೊಳ್ಳಲಿದೆ ಎಂದು ಹೇಳಿದೆ. ದೇಶದಾದ್ಯಂತ ಸುಮಾರು 400 ಹೈಕೋರ್ಟ್ ನ್ಯಾಯಾಧೀಶರ ಹುದ್ದೆ ಕಾಲಿಯಿದೆ.