ಜಾಧವ್ ತಾಯಿಗೆ ವೀಸಾ: ಮನವಿ ಪರಿಶೀಲನೆಯಲ್ಲಿದೆ ಎಂದ ಪಾಕ್ ವಿದೇಶ ಕಚೇರಿ ವಕ್ತಾರ

Update: 2017-07-13 14:57 GMT

ಇಸ್ಲಾಮಾಬಾದ್, ಜು. 13: ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಪಾಕಿಸ್ತಾನದ ಸೇನಾ ನ್ಯಾಯಾಲಯವೊಂದರಿಂದ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್‌ರ ತಾಯಿಗೆ ಪಾಕಿಸ್ತಾನಕ್ಕೆ ಹೋಗಲು ವೀಸಾ ನೀಡಬೇಕೆಂಬ ಭಾರತದ ಮನವಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಪಾಕಿಸ್ತಾನ ಗುರುವಾರ ಹೇಳಿದೆ.

‘‘ಜಾಧವ್‌ರ ತಾಯಿ ಸಲ್ಲಿಸಿರುವ ವೀಸಾ ಅರ್ಜಿಯು ಈಗ ಪರಿಶೀಲನೆಯಲ್ಲಿದೆ’’ ಎಂದು ವಾರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನದ ವಿದೇಶ ಕಚೇರಿಯ ವಕ್ತಾರ ನಫೀಸ್ ಝಕಾರಿಯ ತಿಳಿಸಿದರು.

ಈ ವಿಷಯದಲ್ಲಿ ಯಾವಾಗ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಎಂಬ ಮಾಹಿತಿಯನ್ನು ನೀಡಲು ಅವರು ನಿರಾಕರಿಸಿದರು.

ಜಾಧವ್‌ಗೆ ಎಪ್ರಿಲ್‌ನಲ್ಲಿ ಮರಣ ದಂಡನೆ ಶಿಕ್ಷೆ ಘೋಷಣೆಯಾದ ತಕ್ಷಣ ಅವರ ತಾಯಿ ಅವಂತಿಕಾ ಜಾಧವ್ ಹೊಸದಿಲ್ಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ವೀಸಾ ಅರ್ಜಿ ಸಲ್ಲಿಸಿದ್ದರು.

ತನ್ನ ಮಗನಿಗೆ ಕ್ಷಮಾದಾನ ನೀಡಬೇಕು ಹಾಗೂ ಬಿಡುಗಡೆ ಮಾಡಬೇಕು ಎಂದು ಕೋರುವ ಅರ್ಜಿಯನ್ನೂ ಅವರು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೂಲಕ ಪಾಕಿಸ್ತಾನ ಸರಕಾರಕ್ಕೆ ಕಳುಹಿಸಿದ್ದರು.

ಜಾಧವ್ ತಾಯಿಯ ವೀಸಾ ಅರ್ಜಿಯ ಬಗ್ಗೆ ಮಾಹಿತಿ ನೀಡಿ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಪಾಕಿಸ್ತಾನದ ವಿದೇಶ ನೀತಿ ಮುಖ್ಯಸ್ಥ ಸರ್ತಾಝ್ ಅಝೀಝ್‌ಗೆ ‘ವೈಯಕ್ತಿಕ ಪತ್ರ’ವೊಂದನ್ನೂ ಬರೆದಿದ್ದರು.

ತನ್ನ ಪತ್ರ ಸಿಕ್ಕಿದೆ ಎನ್ನುವುದನ್ನು ತಿಳಿಸುವ ಸೌಜನ್ಯವನ್ನೂ ಸರ್ತಾಝ್ ತೋರಿಸಿಲ್ಲ ಎಂಬುದಾಗಿ ಸೋಮವಾರ ಸುಶ್ಮಾ ಕಟು ಮಾತುಗಳಲ್ಲಿ ಹೇಳಿದ್ದರು.

ಕಾನ್ಸುಲರ್ ಭೇಟಿ ಕೋರಿಕೆಯಲ್ಲಿ ಪ್ರಗತಿಯಿಲ್ಲ:ಭಾರತೀಯ ವಿದೇಶ ಸಚಿವಾಲಯ ವಕ್ತಾರ

ಅದೇ ವೇಳೆ, ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿದೇಶ ಸಚಿವಾಲಯದ ವಕ್ತಾರ ಗೋಪಾಲ್ ಬಾಗ್ಲೇ, ಜಾಧವ್‌ರೊಂದಿಗೆ ಮಾತನಾಡಲು ಕಾನ್ಸುಲೇಟ್ ಅಧಿಕಾರಿಗಳಿಗೆ ಅವಕಾಶ ನೀಡಬೇಕು ಎಂಬ ಭಾರತದ ಮನವಿಯ ವಿಚಾರದಲ್ಲಿ ‘ಯಾವುದೇ ಪ್ರಗತಿಯಿಲ್ಲ’ ಎಂದು ಹೇಳಿದರು.

ಜಾಧವ್‌ರ ತಾಯಿಗೆ ವೀಸಾ ನೀಡಬೇಕೆಂಬ ಮನವಿಯ ಬಗ್ಗೆಯೂ ಪಾಕಿಸ್ತಾನವು ರಾಜತಾಂತ್ರಿಕ ಮಾರ್ಗಗಳ ಮೂಲಕ ಏನನ್ನೂ ತಿಳಿಸಿಲ್ಲ ಎಂದರು.

ಜಾಧವ್ ತಾಯಿಯ ವೀಸಾ ಮನವಿಯನ್ನು ಪರಿಗಣಿಸಲಾಗುತ್ತಿದೆ ಎಂಬ ಪಾಕಿಸ್ತಾನ ವಿದೇಶ ಕಚೇರಿಯ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News