×
Ad

17ರಿಂದ ಸಂಸತ್‌ನ ಮುಂಗಾರು ಅಧಿವೇಶನ: ಕೇಂದ್ರಕ್ಕೆ ಬಿಸಿ ಮುಟ್ಟಿಸಲು ವಿಪಕ್ಷ ಸಜ್ಜು

Update: 2017-07-13 21:37 IST

ಕಾರ್ಯತಂತ್ರ ಹೆಣೆಯಲು 18 ಪ್ರತಿಪಕ್ಷಗಳ ಸಭೆ 

ಹೊಸದಿಲ್ಲಿ,ಜು.13: ಸಂಸತ್‌ನ ಮುಂಗಾರು ಅಧಿವೇಶನ ಜುಲೈ 17ರಂದು ಆರಂಭಗೊಳ್ಳಲಿದ್ದು, ನಗದು ಅಮಾನ್ಯತೆ,ಜಿಎಸ್‌ಟಿ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿ 18 ಪ್ರತಿಪಕ್ಷಗಳು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ.

 ಕಾಂಗ್ರೆಸ್, ಆರ್‌ಜೆಡಿ ಸೇರಿದಂತೆ ವಿವಿಧ ಪ್ರತಿಪಕ್ಷಗಳ ನಾಯಕರು ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ತಾನು ಅನುಸರಿಸಬೇಕಾದ ಕಾರ್ಯತಂತ್ರಗಳು ಹಾಗೂ ಸದನದ ಮುಂದಿಡಬೇಕಾದ ಮುಖ್ಯ ವಿಷಯಗಳ ಕುರಿತು ಗಾಢವಾದ ಚರ್ಚೆ ನಡೆಸಿದರು. ಉಪರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷ ಅಭ್ಯರ್ಥಿಯನ್ನು ಹೆಸರಿಸುವ ವಿಚಾರವಾಗಿ ಮಂಗಳವಾರ ಹೊಸದಿಲ್ಲಿಯಲ್ಲಿ ಈ ಸಭೆಯನ್ನು ಕರೆಯಲಾಗಿತ್ತು.

ಸಂಸತ್ ಅಧಿವೇಶನದಲ್ಲಿ ಜಿಎಸ್‌ಟಿ,ನಗದು ಅಮಾನ್ಯತೆ ಸೇರಿದಂತೆ ಐದು ವಿಷಯಗಳಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಬಗ್ಗೆ 18 ಪಕ್ಷಗಳಲ್ಲಿ ಸಹಮತವೇರ್ಪಟ್ಟಿದೆಯೆಂದು ಮೂಲಗಳು ತಿಳಿಸಿವೆ.

ನಗದು ಅಮಾನ್ಯತೆಯ ದುಷ್ಪರಿಣಾಮಗಳು, ತರಾತುರಿಯೊಂದಿಗೆ ಜಿಎಸ್‌ಟಿ ಅನುಷ್ಠಾನ, ರೈತರ ಆತ್ಮಹತ್ಯೆ ಪ್ರಕರಣಗಳು ಹಾಗೂ ರಾಜಕೀಯ ಹಗೆತನದ, ದೇಶದ ಫೆಡರಲ್ ಸ್ವರೂಪದ ಸಂರಕ್ಷಣೆ ಹಾಗೂ ನಕಲಿ ಸುದ್ದಿಗಳ ಪ್ರಸಾರ ಮತ್ತು ಜನರಲ್ಲಿ ಕೋಮುಭಾವನೆ ಪ್ರಚೋದನೆ ಈ ವಿಷಯವಾಗಿ ಪ್ರತಿಪಕ್ಷಗಳು ಮುಂಗಾರು ಅಧಿವೇಶನದಲ್ಲಿ ಕಾವೇರಿದ ಚರ್ಚೆ ನಡೆಸಲಿವೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.

ನಾರದಾ ಹಗರಣದಲ್ಲಿ ಟಿಎಂಸಿ ನಾಯಕರ ವಿರುದ್ಧ ಪ್ರಕರಣ ದಾಖಲು, ಮಾಜಿ ಸಚಿವರಾದ ಪಿ.ಚಿದಂಬರಂ ಹಾಗೂ ಆರ್‌ಜೆಡಿ ವರಿಷ್ಠ ಲಾಲುಪ್ರಸಾದ್ ಕುಟುಂಬದ ಸದಸ್ಯರ ನಿವಾಸಗಳ ಮೇಲೆ ದಾಳಿ ಇವು ಕೇಂದ್ರ ಸರಕಾರದ ರಾಜಕೀಯ ಹಗೆತನದ ಕಾರ್ಯಸೂಚಿಗೆ ನಿದರ್ಶನಗಳಾಗಿವೆಯೆಂದು ವಿಪಕ್ಷ ಮೂಲಗಳು ತಿಳಿಸಿವೆ.

ಮಂಗಳವಾರದ ಪ್ರತಿಪಕ್ಷ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್‌ಗಾಂಧಿ, ಟಿಎಂಸಿಯ ಡೆರೆಕ್ ಓಬ್ರಿಯಾನ್, ಜೆಡಿಯು ಅಧ್ಯಕ್ಷ ಶರದ್ ಯಾದವ್, ಎನ್‌ಸಿಪಿಯ ಪ್ರಫುಲ್ ಪಟೇಲ್, ಸಿಪಿಎಂನ ಸೀತಾರಾಮ ಯಚೂರಿ, ನ್ಯಾಶನಲ್ ಕಾನ್ಫರೆನ್ಸ್ ಮುಖಂಡ ಉಮರ್ ಅಬ್ದುಲ್ಲಾ, ಸಮಾಜವಾದಿ ಪಕ್ಷದ ನಾಯಕ ನರೇಶ್ ಅಗರ್‌ವಾಲ್, ಬಿಎಸ್ಪಿಯ ಸತೀಶ್ ಮಿಶ್ರಾ ಸೇರಿದಂತೆ 18 ಪ್ರತಿಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು.

   545 ಸದಸ್ಯ ಬಲದ ಲೋಕಸಭೆಯಲ್ಲಿ ಕಾಂಗ್ರೆಸ್ 45 ಮಂದಿ ಸದಸ್ಯರು ಹಾಗೂ ಟಿಎಂಸಿ 34 ಸದಸ್ಯರನ್ನು ಹೊಂದಿದೆ. ಪ್ರತಿಪಕ್ಷಗಳು ಕನಿಷ್ಠ ತಿಂಗಳಿಗೊಮ್ಮೆಯಾದರೂ ಸಭೆ ಸೇರಿ ಮಾತುಕತೆಗಳನ್ನು ನಡೆಸುವ ಮೂಲಕ ಸರಕಾರದ ವಿರುದ್ಧ ತಮ್ಮ ನಿಲುವುಗಳನ್ನು ಸಮನ್ವಯಗೊಳಿಸಬೇಕೆಂದು ಸಮಾಜವಾದಿ ಪಕ್ಷದ ನರೇಶ್ ಅಗರ್‌ವಾಲ್ ಸಭೆಯಲ್ಲಿ ಸಹೆ ನೀಡಿದರೆಂದು ಅಧಿಕೃತ ಮೂಲಗಳು ತಿಳಿಸಿವೆ. ಇತ್ತೀಚೆಗೆ ರಾಷ್ಟ್ರಪತಿ ಅಭ್ಯರ್ಥಿಯಾಗಿ ಮೀರಾ ಕುಮಾರ್ ಆಯ್ಕೆಯಲ್ಲೂ ಪ್ರತಿಪಕ್ಷಗಳು ಏಕತೆಯನ್ನು ಪ್ರದರ್ಶಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News