ಅಮೆರಿಕದ ಮುಸ್ಲಿಮ್ ಪ್ರವೇಶ ನಿಷೇಧ ಆದೇಶ ತಿದ್ದುಪಡಿಗೆ ಫೆಡರಲ್ ನ್ಯಾಯಾಧೀಶ ಆದೇಶ
ವಾಶಿಂಗ್ಟನ್, ಜು. 14: ಆರು ಮುಸ್ಲಿಮ್ ಬಾಹುಳ್ಯದ ದೇಶಗಳ ಪ್ರಜೆಗಳ ಅಮೆರಿಕ ಪ್ರವೇಶಕ್ಕೆ ಟ್ರಂಪ್ ಸರಕಾರ ವಿಧಿಸಿರುವ ನಿಷೇಧದಿಂದ ಅಮೆರಿಕದಲ್ಲಿ ವಾಸಿಸುತ್ತಿರುವವರ ಅಜ್ಜ-ಅಜ್ಜಿ, ಮೊಮ್ಮಕ್ಕಳು ಮತ್ತು ಇತರ ಸಂಬಂಧಿಗಳಿಗೆ ವಿನಾಯಿತಿ ನೀಡಬೇಕು ಎಂದು ಅಮೆರಿಕದ ಹವಾಯಿ ರಾಜ್ಯದ ಫೆಡರಲ್ ನ್ಯಾಯಾಧೀಶರೊಬ್ಬರು ಗುರುವಾರ ತೀರ್ಪು ನೀಡಿದ್ದಾರೆ.
ನ್ಯಾಯಾಧೀಶ ಡೆರಿಕ್ ವಾಟ್ಸನ್‌ರ ತೀರ್ಪು, ನಿಷೇಧ ವಿರೋಧಿಗಳಿಗೆ ಲಭಿಸಿದ ವಿಜಯವಾಗಿದೆ.
ಇದಕ್ಕೂ ಮೊದಲು ಸರಕಾರಿ ಆದೇಶದ ಕೆಲವು ಭಾಗಗಳನ್ನು ಜಾರಿಗೆ ತರಲು ಜೂನ್ 30ರಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಅವಕಾಶ ನೀಡಿತ್ತು. ಜೊತೆಗೆ, ಅಮೆರಿಕದಲ್ಲಿ ವಾಸಿಸುತ್ತಿರುವವರ ‘ಆಪ್ತ ಬಂಧುಗಳು’ ನಿಷೇಧಿತ ದೇಶಗಳಲ್ಲಿ ವಾಸಿಸುತ್ತಿದ್ದರೆ, ಅವರಿಗೆ ನಿಷೇಧದಿಂದ ವಿನಾಯಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಇರಾನ್, ಲಿಬಿಯ, ಸೊಮಾಲಿಯ, ಸುಡಾನ್, ಸಿರಿಯ ಮತ್ತು ಯಮನ್‌ಗಳಿಂದ ಬರುವ ಸಂದರ್ಶಕರ ಅಮೆರಿಕ ಪ್ರವೇಶಕ್ಕೆ 90 ದಿನಗಳ ನಿಷೇಧ ಹಾಗೂ ನಿರಾಶ್ರಿತರಿಗೆ 120 ದಿನಗಳ ನಿಷೇಧ ವಿಧಿಸುವ ಸರಕಾರಿ ಆದೇಶದ ಭಾಗಗಳನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
‘ಆಪ್ತ ಬಂಧುಗಳು’ ಎಂದರೆ ಹೆತ್ತವರು, ಗಂಡ-ಹೆಂಡತಿ, ಮಕ್ಕಳು, ಪ್ರಿಯಕರ-ಪ್ರಿಯತಮೆ ಮತ್ತು ಸಹೋದರ-ಸಹೋದರಿಯರು ಎಂಬ ವ್ಯಾಖ್ಯಾನವನ್ನು ಟ್ರಂಪ್ ಸರಕಾರ ನೀಡಿದೆ.
ಈಗ ಹವಾಯಿ ಫೆಡರಲ್ ನ್ಯಾಯಾಧೀಶ ಡೆರಿಕ್ ವಾಟ್ಸನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆಪ್ತ ವಲಯದ ಬಂಧುಗಳ ಪಟ್ಟಿಗೆ ಅಜ್ಜ-ಅಜ್ಜಿ, ಮೊಮ್ಮಕ್ಕಳನ್ನು ಸೇರಿಸಿದ್ದಾರೆ.
ಅಜ್ಜ-ಅಜ್ಜಿ ಕುಟುಂಬದ ಕಣ್ಣು
‘‘ಸರಕಾರ ತಯಾರಿಸಿರುವ ಆಪ್ತ ಬಂಧುಗಳ ಪಟ್ಟಿಯಲ್ಲಿ ಅಜ್ಜ-ಅಜ್ಜಿಯರ ಹೆಸರೇ ಇಲ್ಲ. ಒಂದು ಕುಟುಂಬದಲ್ಲಿ ಅಜ್ಜ-ಅಜ್ಜಿಯರು ಕೇಂದ್ರ ಬಿಂದುವಾಗಿರುತ್ತಾರೆ. ಸರಕಾರ ತನ್ನ ಪಟ್ಟಿಯನ್ನು ತಿದ್ದಿಕೊಳ್ಳಬೇಕು’’ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಅಜ್ಜ-ಅಜ್ಜಿಯರು, ಮೊಮ್ಮಕ್ಕಳು, ಭಾವಂದಿರು, ಅತ್ತಿಗೆಯಂದಿರು, ಚಿಕ್ಕಮ್ಮಂದಿರು, ಸೋದರತ್ತೆಯಂದಿರು, ಚಿಕ್ಕಮ್ಮಂದಿರು, ಸೋದರಮಾವಂದಿರು, ಸೋದರ ಸೊಸೆಯಂದಿರು, ಸೋದರಳಿಯಂದಿರು, ಸೋದರ ಸಂಬಂಧಿಗಳನ್ನು ಆಪ್ತ ಬಂಧುಗಳ ಪಟ್ಟಿಗೆ ಸೇರಿಸುವಂತೆ ವಾಟ್ಸನ್ ಆಂತರಿಕ ಭದ್ರತೆ ಇಲಾಖೆಗೆ ಆದೇಶ ನೀಡಿದ್ದಾರೆ.