ವಿವಾದ ಪರಿಹಾರಕ್ಕೆ ಭಾರತ-ಪಾಕ್ ಮಾತುಕತೆಯೇ ಸೂಕ್ತ: ವಿಶ್ವಸಂಸ್ಥೆ ಪುನರುಚ್ಚಾರ
ವಿಶ್ವಸಂಸ್ಥೆ, ಜು. 14: ಮಾತುಕತೆ ಮೂಲಕ ಕಾಶ್ಮೀರ ವಿವಾದಕ್ಕೆ ಶಾಂತಿಯುತ ಪರಿಹಾರವೊಂದನ್ನು ಭಾರತ ಮತ್ತು ಪಾಕಿಸ್ತಾನಗಳು ಕಂಡುಕೊಳ್ಳುವುದು ಅಗತ್ಯವಾಗಿದೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟರಸ್ ಪುನರುಚ್ಚರಿಸಿದ್ದಾರೆ.
ಈ ವಲಯದ ಪರಿಸ್ಥಿತಿಯ ಬಗ್ಗೆ ಮಹಾಕಾರ್ಯದರ್ಶಿ ಗಮನಹರಿಸಿದ್ದಾರೆಯೇ ಅಥವಾ ಅವರ ಗಮನ ಸೆಳೆಯುವಂಥ ದೊಡ್ಡ ದುರಂತವೊಂದು ಸಂಭವಿಸುವುದನ್ನು ನಾವು ಎದುರುನೋಡುತ್ತಿದ್ದೇವೆಯೇ ಎಂಬ ಪ್ರಶ್ನೆಗೆ ಗುಟರಸ್‌ರ ವಕ್ತಾರ ಸ್ಟೀಫನ್ ಡುಜರಿಕ್ ಉತ್ತರಿಸುತ್ತಿದ್ದರು.
‘‘ಸಂಬಂಧಪಟ್ಟ ಪಕ್ಷಗಳು ಮಾತುಕತೆ ಮೂಲಕ ವಿವಾದಕ್ಕೆ ಶಾಂತಿಯುತ ಪರಿಹಾರವೊಂದನ್ನು ಕಂಡುಹಿಡಿಯಬೇಕಾದ ಅಗತ್ಯವಿದೆ ಎಂಬುದನ್ನು ನಾವು ಪುನರುಚ್ಚರಿಸುತ್ತೇವೆ’’ ಎಂದು ಗುರುವಾರ ಇಲ್ಲಿ ನಡೆದ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಡುಜರಿಕ್ ನುಡಿದರು.
‘‘ಗಮನ ನೀಡುವ ಬಗ್ಗೆ ಹೇಳುವುದಾದರೆ, ಪತ್ರಿಕಾಗೋಷ್ಠಿಯೊಂದರಲ್ಲಿ ಸ್ವತಃ ಮಹಾಕಾರ್ಯದರ್ಶಿಯವರೇ ಈ ಪ್ರಶ್ನೆಗೆ ಉತ್ತರಿಸಿದ್ದಾರೆ ಎಂದು ನನಗನಿಸುತ್ತದೆ’’ ಎಂದರು.
ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಜೂನ್‌ನಲ್ಲಿ ನಡೆದ ಗುಟರಸ್‌ರ ಪ್ರಥಮ ಪತ್ರಿಕಾಗೋಷ್ಠಿಯನ್ನು ವಕ್ತಾರ ಉಲ್ಲೇಖಿಸುತ್ತಿದ್ದರು.
ಕಾಶ್ಮೀರ ವಿವಾದಕ್ಕೆ ಪರಿಹಾರವನ್ನು ಹುಡುಕಲು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಮಾತುಕತೆಯನ್ನು ಏರ್ಪಡಿಸುವ ಬಗ್ಗೆ ಯೋಚಿಸಿರುವಿರೇ ಎಂಬುದಾಗಿ ಅಂದಿನ ಪತ್ರಿಕಾಗೋಷ್ಠಿಯಲ್ಲಿ ಗುಟರಸ್‌ಗೆ ಕೇಳಲಾಗಿತ್ತು.
‘‘ಪಾಕಿಸ್ತಾನದ ಪ್ರಧಾನಿಯನ್ನು ಮೂರು ಬಾರಿ ಮತ್ತು ಭಾರತದ ಪ್ರಧಾನಿಯನ್ನು ಎರಡು ಬಾರಿ ನಾನು ಭೇಟಿಯಾಗಿದ್ದು ಮತ್ತೆ ಯಾಕೆಂದು ಕೊಂಡಿರಿ’’ ಎಂಬ ಉತ್ತರವನ್ನು ಗುಟರಸ್ ನೀಡಿದ್ದರು.