ಅಮೆರಿಕ ವೀಸಾಕ್ಕೆ ವಿಸ್ತೃತ ಮಾಹಿತಿ ಕಡ್ಡಾಯ
Update: 2017-07-14 20:16 IST
ವಾಶಿಂಗ್ಟನ್, ಜು. 14: ಅಮೆರಿಕ ವೀಸಾಗಳಿಗೆ ಅರ್ಜಿ ಸಲ್ಲಿಸುವ ಪ್ರಯಾಣಿಕರ ವಿಸ್ತೃತ ಮಾಹಿತಿಗಳನ್ನು ಆಯಾಯ ದೇಶಗಳು ಅಮೆರಿಕದ ವಿದೇಶ ಇಲಾಖೆಗೆ ಒದಗಿಸುವುದನ್ನು ಕಡ್ಡಾಯಗೊಳಿಸುವ ನೀತಿಯೊಂದನ್ನು ಅಮೆರಿಕ ಜಾರಿಗೆ ತಂದಿದೆ.
ಪ್ರಯಾಣಿಕನೊಬ್ಬ ಭಯೋತ್ಪಾದಕ ಬೆದರಿಕೆಯನ್ನು ಒಡ್ಡುತ್ತಾನೆಯೇ ಎಂಬುದನ್ನು ತಿಳಿಯಲು ಇದು ಅವಶ್ಯಕವಾಗಿದೆ ಎಂದು ಅದು ಹೇಳಿದೆ.
ನೂತನ ನಿಯಮಗಳಿಗೆ ಹೊಂದಿಕೊಳ್ಳದ ಅಥವಾ 50 ದಿನಗಳಲ್ಲಿ ಈ ಬಗ್ಗೆ ಕ್ರಮ ತೆಗೆದುಕೊಳ್ಳದ ದೇಶಗಳು ಪ್ರಯಾಣ ನಿರ್ಬಂಧವನ್ನು ಎದುರಿಸುವ ಸಾಧ್ಯತೆಯಿದೆ.
ಎಲ್ಲ ದೇಶಗಳಲ್ಲಿರುವ ಅಮೆರಿಕ ರಾಯಭಾರ ಕಚೇರಿಗಳಿಗೆ ಬುಧವಾರ ನೂತನ ನಿಯಮಗಳನ್ನು ಒಳಗೊಂಡ ಸಂದೇಶಗಳನ್ನು ಕಳುಹಿಸಲಾಗಿದೆ.