×
Ad

ಸೇನಾಧಿಕಾರಿಗಳ ಮೇಲೆ ಹಲ್ಲೆ: ಸಿಬಿಐನಿಂದ ಮ.ಪ್ರ. ಪೊಲೀಸರ ವಿರುದ್ಧ ಎಫ್‌ಐಆರ್

Update: 2017-07-14 20:27 IST

ಇಂದೋರ,ಜು.14: ಎರಡು ವರ್ಷಗಳ ಹಿಂದೆ ಇಲ್ಲಿಯ ವಿಜಯನಗರ ಪ್ರದೇಶ ದಲ್ಲಿ ಸಾರ್ವಜನಿಕವಾಗಿ ಮದ್ಯಸೇವನೆ ಕುರಿತು ವಾಗ್ವಾದದ ಬಳಿಕ ಮಿಲಿಟರಿ ಅಧಿಕಾರಿ ಗಳನ್ನು ಥಳಿಸಿದ ಆರೋಪಿಗಳಾಗಿರುವ ಮಧ್ಯಪ್ರದೇಶ ಪೊಲೀಸರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.

2015,ಸೆ.10ರಂದು ಮಧ್ಯರಾತ್ರಿ ಸುಮಾರಿಗೆ ಬಾರೊಂದರ ಹೊರಗೆ ತಮ್ಮ ಸ್ನೇಹಿತರಿ ಗಾಗಿ ಕಾಯುತ್ತಿದ್ದಾಗ ವಿಜಯನಗರ ಠಾಣೆಯ ಪೊಲೀಸರ ತಂಡವೊಂದು ತಮ್ಮ ಮೇಲೆ ಹಲ್ಲೆ ನಡೆಸಿದೆ, ಅಲ್ಲದೆ ಇಬ್ಬರು ಅಧಿಕಾರಿಗಳನ್ನು ಠಾಣೆಗೆ ಕರೆದೊಯ್ದು ಅಕ್ರಮ ಬಂಧನದಲ್ಲಿರಿಸಿತ್ತು ಎಂದು ಲೆಫ್ಟಿನೆಂಟ್ ದರ್ಜೆಯ ಒಂಭತ್ತು ಸೇನಾಧಿಕಾರಿಗಳು ಆರೋಪಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ 60ಕ್ಕೂ ಅಧಿಕ ಯೋಧರು ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ನಡೆಸಿದ್ದಲ್ಲದೆ ಕರ್ತವ್ಯದಲ್ಲಿದ್ದ ಪೊಲೀಸರನ್ನು ಥಳಿಸಿದ್ದರು. ಓರ್ವ ಮಹಿಳಾ ಕಾನ್‌ಸ್ಟೇಬಲ್ ಸೇರಿದಂತೆ ಐವರು ಪೊಲೀಸರು ಗಾಯಗೊಂಡಿದ್ದರು. ಈ ಬಗ್ಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಯೋಧರು ಹಲ್ಲೆಯ ವೀಡಿಯೊ ದೃಶ್ಯಗಳು ದಾಖಲಾಗಿದ್ದ ಹಾರ್ಡ್ ಡಿಸ್ಕ್‌ಗಳನ್ನೂ ಒಯ್ದಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು.

ತಮ್ಮ ಮೇಲೆ ಹಲ್ಲೆ ನಡೆಸಿದ್ದ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಾಗಿಲ್ಲವೆಂದು ಸೇನಾಧಿಕಾರಿಗಳು ದೂರಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ಸಿಬಿಐಗೆ ನಿರ್ದೇಶ ನೀಡಿತ್ತು.

ಸಿಬಿಐ ಗುರುವಾರ ಎಸ್‌ಪಿ ವಿಪುಲ್ ಶ್ರೀವಾಸ್ತವ ಮತ್ತು ಇತರ ಹಲವಾರು ಪೊಲೀಸರ ವಿರುದ್ಧ ಹಲ್ಲೆ ಮತ್ತು ಅಕ್ರಮ ದಿಗ್ಬಂಧನದ ಆರೋಪಗಳನ್ನು ಹೊರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News