ಅಮೆರಿಕದಲ್ಲಿ ಅಧ್ಯಯನ: ಭಾರತೀಯ ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆತಂಕ

Update: 2017-07-15 14:07 GMT

ವಾಶಿಂಗ್ಟನ್, ಜು. 15: ಅಮೆರಿಕದಲ್ಲಿ ಅಧ್ಯಯನ ಮಾಡುವ ವಿಷಯದಲ್ಲಿ ಭಾರತೀಯ ವಿದ್ಯಾರ್ಥಿಗಳು ಹೆಚ್ಚೆಚ್ಚು ಚಿಂತಿತರಾಗಿದ್ದಾರೆ ಹಾಗೂ ಅವರ ಪೈಕಿ ಹೆಚ್ಚಿನವರು ತಮ್ಮ ದೈಹಿಕ ಸುರಕ್ಷತೆ ಮತ್ತು ಅಲ್ಲಿ ತಾವು ಆಹ್ವಾನಿತರೇ ಎಂಬ ಬಗ್ಗೆ ಕಳವಳ ಹೊಂದಿದ್ದಾರೆ ಎಂದು ನೂತನ ಸಮೀಕ್ಷೆಯೊಂದು ತಿಳಿಸಿದೆ.

ಆರು ಮುಸ್ಲಿಮ್ ಬಾಹುಳ್ಯದ ದೇಶಗಳ ಪ್ರಜೆಗಳ ಅಮೆರಿಕ ಪ್ರವೇಶವನ್ನು ನಿರ್ಬಂಧಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆದೇಶವನ್ನು ಜೂನ್‌ನಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್ ತಾತ್ಕಾಲಿಕವಾಗಿ ಎತ್ತಿಹಿಡಿದ ನಂತರದ ಬೆಳವಣಿಗೆಗಳು ಅವರನ್ನು ಈ ರೀತಿಯಾಗಿ ಯೋಚಿಸುವಂತೆ ಮಾಡಿವೆ ಎಂದು ಸಮೀಕ್ಷೆ ನಡೆಸಿದ ಇನ್‌ಸ್ಟಿಟ್ಯೂಟ್ ಆಫ್ ಇಂಟರ್‌ನ್ಯಾಶನಲ್ ಎಜುಕೇಶನ್ (ಐಐಇ) ಹೇಳಿದೆ.

ಹತ್ತು ಲಕ್ಷಕ್ಕೂ ಅಧಿಕ ವಿದೇಶಿ ವಿದ್ಯಾರ್ಥಿಗಳು ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಹಾಗೂ ಈ ಮೂಲಕ ಅವರು ಅಮೆರಿಕದ ಆರ್ಥಿಕತೆಗೆ 36 ಬಿಲಿಯ ಡಾಲರ್ (2.31 ಲಕ್ಷ ಕೋಟಿ ರೂಪಾಯಿ)ಗಿಂತಲೂ ಅಧಿಕ ದೇಣಿಗೆಯನ್ನು ನೀಡುತ್ತಿದ್ದಾರೆ.

1919ರಲ್ಲಿ ಸ್ಥಾಪನೆಯಾಗಿರುವ ಐಐಇ ಅಮೆರಿಕದ ಲಾಭ ಉದ್ದೇಶರಹಿತ ಸಂಘಟನೆ. ಸ್ಕಾಲರ್‌ಶಿಪ್‌ಗಳನ್ನು ನೀಡುವ ಮೂಲಕ, ಆರ್ಥಿಕತೆಗಳನ್ನು ನಿರ್ಮಿಸುವ ಮೂಲಕ ಮತ್ತು ಅವಕಾಶಗಳಿಗೆ ಮಾರ್ಗಗಳನ್ನು ಕಳುಹಿಸುವ ಮೂಲಕ ಶಾಂತಿಯುತ ಮತ್ತು ಸಮಾನತೆಯ ಸಮಾಜಗಳನ್ನು ನಿರ್ಮಿಸಲು ಅದು ಪ್ರಯತ್ನಿಸುತ್ತಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿ ವಿನಿಮಯ ಮತ್ತು ನೆರವು, ವಿದೇಶ ವ್ಯವಹಾರಗಳು ಮತ್ತು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಅದು ಹೆಚ್ಚಿನ ಮಹತ್ವ ನೀಡುತ್ತದೆ.

ಅಮೆರಿಕದಲ್ಲಿ ಕಲಿಯುವ ಬಗ್ಗೆ ಹೆಚ್ಚಿನ ಪ್ರಮಾಣದ ಕಳವಳ ವ್ಯಕ್ತವಾಗಿರುವುದು ಮಧ್ಯಪ್ರಾಚ್ಯದಲ್ಲಿ ಹಾಗೂ ಬಳಿಕ ಭಾರತದಲ್ಲಿ.

ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಧ್ಯಪ್ರಾಚ್ಯದ ವಿದ್ಯಾರ್ಥಿಗಳು ಅಮೆರಿಕಕ್ಕೆ ಕಲಿಯಲು ಬರುವ ಸಾಧ್ಯತೆಯಿಲ್ಲ ಎಂಬ ವರದಿಗಳಿಂದ ಅಮೆರಿಕದ 31 ಶೇಕಡ ಶೈಕ್ಷಣಿಕ ಸಂಸ್ಥೆಗಳು ಕಳವಳಗೊಂಡಿವೆ. ಅದೇ ವೇಳೆ, ಭಾರತೀಯ ವಿದ್ಯಾರ್ಥಿಗಳು ಬರಲಾರರು ಎಂಬ ಯೋಚನೆಯಿಂದ 20 ಶೇಕಡದಷ್ಟು ವಿದ್ಯಾ ಸಂಸ್ಥೆಗಳು ಚಿಂತೆಗೆ ಬಿದ್ದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News