ವಿಂಬಲ್ಡನ್: ಅಭಿಮಾನಿಯೊಬ್ಬನಿಗೆ ಆಡಲು ಸ್ಕರ್ಟ್ ನೀಡಿದ ಕ್ಲಿಸ್ಟರ್ಸ್‌!

Update: 2017-07-15 15:01 GMT

ಲಂಡನ್, ಜು.15: ವಿಂಬಲ್ಡನ್ ಟೂರ್ನಿ ಕಟ್ಟುನಿಟ್ಟಿನ ವಸ್ತ್ರ ಸಂಹಿತೆಗೆ ಖ್ಯಾತಿ ಪಡೆದಿದೆ. ಎಲ್ಲ ಆಟಗಾರರು ಶ್ವೇತವರ್ಣದ ವಸ್ತ್ರವನ್ನು ಧರಿಸುತ್ತಾರೆ. ಈನಡುವೆ ವಿಂಬಲ್ಡನ್‌ನ ಆಹ್ವಾನಿತ ಮಹಿಳೆಯರ ಡಬಲ್ಸ್ ಸ್ಪರ್ಧೆಯಲ್ಲಿ ತಮಾಷೆಯ ಘಟನೆಯೊಂದು ನಡೆದಿದೆ.

  ನಿವೃತ್ತ ಆಟಗಾರ್ತಿಯರಿಗೆ ಆಯೋಜಿಸಲಾಗಿದ್ದ ಆಹ್ವಾನಿತ ಪ್ರದರ್ಶನ ಪಂದ್ಯದಲ್ಲಿ ಬೆಲ್ಜಿಯಂನ ಮಾಜಿ ನಂ.1 ಆಟಗಾರ್ತಿ ಕಿಮ್ ಕ್ಲಿಸ್ಟರ್ಸ್‌ ನೇತೃತ್ವದ ನಾಲ್ವರು ನಿವೃತ್ತ ಆಟಗಾರ್ತಿಯರು ಭಾಗವಹಿಸಿದ್ದರು. ಪಂದ್ಯದ ವೇಳೆ ಕ್ಲಿಸ್ಟರ್ಸ್‌ ಅವರು ತನ್ನ ಆಸ್ಟ್ರೇಲಿಯದ ಜೊತೆಗಾರ್ತಿಯನ್ನು ಉದ್ದೇಶಿಸಿ ತಾನು ಎಲ್ಲಿ ಸರ್ವ್ ಮಾಡಬೇಕೆಂದು ಕೇಳಿದರು. ಆಗ ಪ್ರೇಕ್ಷಕರ ಸಾಲಿನಲ್ಲಿ ಹಸಿರು ಬಣ್ಣದ ಬಟ್ಟೆ ಧರಿಸಿ ಕುಳಿತ್ತಿದ್ದ ದಢೂತಿ ದೇಹದ ವ್ಯಕ್ತಿಯೊಬ್ಬ ಎದ್ದುನಿಂತು ತಾನು ನಿಮಗೆ ಸರ್ವ್ ಮಾಡುತ್ತೇನೆ ಎಂದು ಹೇಳಿದ. ಆಗ ಆ ವ್ಯಕ್ತಿಯನ್ನು ಟೆನಿಸ್ ಅಂಗಣಕ್ಕೆ ಕ್ಲಿಸ್ಟರ್ಸ್‌ ಆಹ್ವಾನಿಸಿದರು. ಓರ್ವ ಆಟಗಾರ್ತಿ ಮಾರ್ಟಿನೆಝ್ ವ್ಯಕ್ತಿಗೆ ಆಡಲು ರಾಕೆಟ್‌ನ್ನು ನೀಡಿದರೆ, ಕ್ಲಿಸ್ಟರ್ಸ್‌ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಬ್ಯಾಗ್‌ನಲ್ಲಿದ್ದ ಬಿಳಿ ಸ್ಕರ್ಟ್‌ನ್ನು ನೀಡಿದರು. ದಢೂತಿ ವ್ಯಕ್ತಿ ಕಷ್ಟಪಟ್ಟು ಸ್ಕರ್ಟ್‌ನ್ನು ಧರಿಸಿಕೊಂಡರು. ಆಗ ಕ್ಲಿಸ್ಟರ್ಸ್‌ ಬಿದ್ದುಬಿದ್ದು ನಕ್ಕರು. ಸ್ಕರ್ಟ್ ಧರಿಸಿ ಆಟಗಾರ್ತಿಯರೊಂದಿಗೆ ಕೆಲವು ಸಮಯ ಆಡಿದ ಆ ವ್ಯಕ್ತಿ ನಾಲ್ವರು ನಿವೃತ್ತ ಆಟಗಾರ್ತಿಯರೊಂದಿಗೆ ಗ್ರೂಪ್ ಫೋಟೊವನ್ನು ತೆಗೆಸಿಕೊಂಡರು.

 ಕ್ಲಿಸ್ಟರ್ಸ್‌ ನಾಲ್ಕು ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ವಿಜೇತ ಆಟಗಾರ್ತಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News