×
Ad

ನೋಟು ರದ್ದತಿಯ ಬಳಿಕ ಕಾರ್ಡ್ ಮೂಲಕ ವಹಿವಾಟುಗಳಲ್ಲಿ ಕೇವಲ ಶೇ.7 ಏರಿಕೆ

Update: 2017-07-16 19:08 IST

ಹೊಸದಿಲ್ಲಿ,ಜು.16: ನೋಟು ರದ್ದತಿಯ ಬಳಿಕ ಒಟ್ಟಾರೆ ಡಿಜಿಟಲ್ ವ್ಯವಹಾರಗಳಲ್ಲಿ ಶೇ.23ಕ್ಕೂ ಅಧಿಕ ಹೆಚ್ಚಳವಾಗಿದ್ದರೆ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ವಹಿವಾಟುಗಳಲ್ಲಿ ಕೇವಲ ಶೇ.7ರಷ್ಟು ಏರಿಕೆಯಾಗಿದೆ. ವಿವಿಧ ಸಚಿವಾಲಯಗಳ ಅಧಿಕಾರಿಗಳು ‘ನೋಟು ಅಮಾನ್ಯ ಮತ್ತು ಡಿಜಿಟಲ್ ಆರ್ಥಿಕತೆಯತ್ತ ರೂಪಾಂತರ’ಕ್ಕೆ ಸಂಬಂಧಿಸಿದ ಹಣಕಾಸು ಕುರಿತ ಸಂಸದೀಯ ಸ್ಥಾಯಿ ಸಮಿತಿಗೆ ಸಲ್ಲಿಸಿರುವ ವರದಿಗಳಲ್ಲಿ ಈ ವಿಷಯವನ್ನು ತಿಳಿಸಲಾಗಿದೆ.

ನವಂಬರ್,2016ರಲ್ಲಿ 22.4 ಮಿಲಿಯನ್ ಇದ್ದ ಎಲ್ಲ ವಿಧಗಳ ಡಿಜಿಟಲ್ ವಹಿವಾಟುಗಳ ಸಂಖ್ಯೆ ಮೇ,2017ರ ವೆಳೆಗೆ ಶೇ.23 ಏರಿಕೆಯೊಡನೆ 27.5 ಮಿಲಿಯನ್‌ಗೆ ತಲುಪಿದೆ. ಅತ್ಯಂತ ಹೆಚ್ಚಿನ ಏರಿಕೆ ಯುಪಿಐ ಮೂಲಕ ವಹಿವಾಟುಗಳಲ್ಲಿ ಕಂಡು ಬಂದಿದೆ ಎಂದು ವರದಿಗಳು ತಿಳಿಸಿವೆ.

ಇದೇ ಅವಧಿಯಲ್ಲಿ ಐಎಂಪಿಎಸ್ ಅಥವಾ ತಕ್ಷಣ ಪಾವತಿ ಸೇವೆಯ ಮೂಲಕ ವಹಿವಾಟುಗಳ ಸಂಖ್ಯೆ 1.2 ಮಿ.ದಿಂದ 2.2 ಮಿ.ಗೇರಿದೆ.

ಆದರೆ ನವಂಬರ್,2016ರಲ್ಲಿ 6.8 ಮಿ.ಗಳಷ್ಟಿದ್ದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ವಹಿವಾಟುಗಳ ಸಂಖ್ಯೆ ಈ ವರ್ಷದ ಮೇ ವೇಳೆಗೆ ಕೇವಲ ಶೇ.7ರಷ್ಟು ಏರಿಕೆಯೊಂಂದಿಗೆ 7.3 ಮಿ.ಗೆ ತಲುಪಿದೆ.

ನೋಟು ರದ್ದತಿಯ ಬಳಿಕ ಡಿಜಿಟಲ್ ವಹಿವಾಟುಗಳಿಗೆ ಹೆಚ್ಚಿನ ಉತ್ತೇಜನ ನೀಡಿದ್ದ ಕೇಂದ್ರ ಸರಕಾರವು ಬಹುಮಾನ ಯೋಜನೆಗಳನ್ನೂ ಜಾರಿಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News