ಅಸ್ಸಾಂ ನೆರೆ: ಸಾವಿನ ಸಂಖ್ಯೆ 60ಕ್ಕೆ ಏರಿಕೆ

Update: 2017-07-16 17:35 GMT

ಗುವಾಹತಿ, ಜು. 16: ಅಸ್ಸಾಂನಲ್ಲಿ ನೆರೆಗೆ ಶನಿವಾರ ಮತ್ತೆ 7 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ನೆರೆಯಿಂದ ಮೃತಪಟ್ಟವರ ಸಂಖ್ಯೆ 60ಕ್ಕೇರಿದೆ.

ಬ್ರಹ್ಮಪುತ್ರ ಹಾಗೂ ಅದರ ಉಪನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ ರಾಜ್ಯದ 24 ಜಿಲ್ಲೆಗಳು ತೊಂದರೆಗೊಳಗಾಗಿವೆ. ನೆರೆಯಿಂದ ಶಿವಸಾಗರ್‌ನಲ್ಲಿ ಇಬ್ಬರು, ಮೋರಿಗಾಂವ್, ಬೊಗಾಯ್‌ಗಾಂವ್, ದಕ್ಷಿಣ ಸಲ್ಮರಾ, ಸೊಂಟಿಪುರ ಹಾಗೂ ಜೊಹ್ರಾತ್ ಜಿಲ್ಲೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಆದರೆ ನೆರೆ ಸಂತ್ರಸ್ತರು ಹಿಂದಿನಂತಿಲ್ಲ. ನೆರೆ ಸಂತ್ರಸ್ತರು ಈ ಹಿಂದಿನಂತೆ ನಿರಾಶ್ರಿತರ ಶಿಬಿರಗಳಲ್ಲಿ ನೆಲೆಸಲು ಬಯಸುತ್ತಿಲ್ಲ. ಅವರು ಮನೆಯಲ್ಲೇ ನಿಲ್ಲಲು ಬಯಸುತ್ತಿದ್ದಾರೆ. ಇವರಿಗೆ ಪರಿಹಾರ ತಲುಪಿಸುವುದು ಸವಾಲಿನ ವಿಚಾರ ಎಂದು ಹಣಕಾಸು ಸಚಿವ ಹಿಮಂತ್ ಬಿಸ್ವಾಸ್ ಶರ್ಮಾ ಹೇಳಿದ್ದಾರೆ.

ನೆರೆ ಸಂತ್ರಸ್ತರ ಪರಿಹಾರಕ್ಕೆ ಯಾತ್ರಿಕ ಅಥವಾ ಸ್ಪೀಡ್ ಬೋಟ್‌ಗಳನ್ನು ಕಳುಹಿಸಿಕೊಡಲಾಗುತ್ತಿದೆ. ಆದರೆ, ಒಂದು ದಿನ ಒಂದು ಗ್ರಾಮಕ್ಕೆ ಮಾತ್ರ ಹೋಗಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಎಲ್ಲೆಲ್ಲೂ ನೀರು ಆವರಿಸಿಕೊಂಡಿರುವುದರಿಂದ ಪರಿಹಾರ ವಸ್ತುಗಳನ್ನು ಹೆಲಿಕಾಪ್ಟರ್ ಮೂಲಕ ಕೆಳಗೆ ಹಾಕಲು ಸಾಧ್ಯವಿಲ್ಲ. ನೆರೆ ಸಂತ್ರಸ್ತ ಜಿಲ್ಲೆಗಳಲ್ಲಿ ಪರಿಹಾರ ವಸ್ತುಗಳನ್ನು ಪೂರೈಸುವಂತೆ ಉಪ ಆಯುಕ್ತರಿಗೆ ನಾವು ನಿರ್ದೇಶನ ನೀಡಿದ್ದೇವೆ ಎಂದು ಶರ್ಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News