×
Ad

ಗುಜರಾತ್‌ನಲ್ಲಿ ಭಾರೀ ಮಳೆ: 7 ಸಾವು, 2 ಸಾವಿರ ಜನರ ಸ್ಥಳಾಂತರ

Update: 2017-07-16 23:03 IST

ಅಹ್ಮದಾಬಾದ್, ಜು. 16: ಶುಕ್ರವಾರ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಸೌರಾಷ್ಟ್ರದ ರಾಜ್‌ಕೋಟ್, ಮೊರ್ಬಿ, ಜಾಮ್‌ನಗರ್ ಹಾಗೂ ಸುರೇಂದ್ರ ನಗರ್ ಜಿಲ್ಲೆಗಳ ವಿವಿಧ ಭಾಗಗಳು ನೆರೆ ಉದ್ಭವಿಸಿದ್ದು, ಎಡೆಬಿಡದೆ ಸುರಿಯುತ್ತಿರುವ ಮಳೆಗೆ 7 ಮಂದಿ ಮೃತಪಟ್ಟಿದ್ದಾರೆ. 2 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ.

  ಭಾರೀ ಮಳೆಗೆ ಅಹ್ಮದಾಬಾದ್‌ನಲ್ಲಿ ಇಬ್ಬರು, ರಾಜ್‌ಕೋಟ್, ಸುರೇಂದ್ರನಗರ್, ಅರಾವಳಿ, ಬಾನಸ್ಕಾಂತ ಹಾಗೂ ಗಾಂಧಿನಗರದಲ್ಲಿ ತಲಾ ಓರ್ವರು ಸೇರಿದಂತೆ ಒಟ್ಟು 7 ಮಂದಿ ಮೃತಪಟ್ಟಿದ್ದಾರೆ. ಜಾಮ್‌ನಗರದ ಅಲಿಯಬ್ಬಾ ಸಮಿಪ ರೂಪಾರೈಲ್ ನದಿ ಪ್ರವಾಹದಲ್ಲಿ ಕಾರು ಕೊಚ್ಚಿಕೊಂಡು ಹೋದ ಪರಿಣಾಮ ಮೂವರು ನಾಪತ್ತೆ ಯಾಗಿದ್ದಾರೆ. ಎನ್‌ಡಿಆರ್‌ಫ್ ತಂಡ ಕಾರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಆದರೆ, ಅದರೊಳಗಿದ್ದ ಪ್ರಯಾಣಿಕರು ಇದುವರೆಗೆ ಪತ್ತೆಯಾಗಿಲ್ಲ. ರವಿವಾರ ಬೆಳಗ್ಗಿನಿಂದ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಜಾಮ್‌ನಗರ್ ಜಿಲ್ಲಾಧಿಕಾರಿ ಆರ್.ಜೆ. ಮಕಾಡಿಯಾ ತಿಳಿಸಿದ್ದಾರೆ.

ಪ್ರವಾಹಕ್ಕೆ ತುತ್ತಾದ ಗ್ರಾಮಗಳಲ್ಲಿ ಭಾರತೀಯ ಸೇನಾ ಪಡೆ, ಭಾರತೀಯ ವಾಯು ಪಡೆ, ರಾಷ್ಟ್ರೀಯ ವಿಕೋಪ ಪ್ರತಿಕ್ರಿಯೆ ಪಡೆ ಜನರನ್ನು ಸ್ಥಳಾಂತರಗೊಳಿಸುತ್ತಿದೆ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಇಂದು ಸಂಜೆ ಮಳೆ ಸುರಿಯುತ್ತಿರುವುದು ಕಡಿಮೆಯಾಗಿದ್ದು, ಹಲವು ಭಾಗಗಳಲ್ಲಿ ನೀರು ಇಳಿಯುತ್ತಿದೆ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ 24 ಗಂಟೆ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ಅಧಿಕಾರಿಗಳು ಜಾಗೃತರಾಗಿದ್ದಾರೆ.

ಭಾರೀ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ. ರಾಜ್‌ಕೋಟ್‌ನಲ್ಲಿ ನೆರ ಉದ್ಭವಿಸಿದ ಹಿನ್ನೆಲೆಯಲ್ಲಿ ಜನಜೀವನ ಸ್ಥಗಿತವಾಗಿದೆ. ರಾಜ್‌ಕೋಟ್, ಜಾಮ್‌ನಗರ್ ಹಾಗೂ ಮೊರ್ಬಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆ, ಕಾಲೇಜುಗಳಿಗೆ ರಜೆ ಸಾರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News