ಕಡಬ ಭಾಗಶಃ ಬಂದ್

Update: 2017-07-17 06:56 GMT

ಕಡಬ, ಜು.17: ಕಡಬ ಸಿ.ಎ. ಬ್ಯಾಂಕ್ ಉಪಾಧ್ಯಕ್ಷ, ಬಿಜೆಪಿ ಮುಖಂಡ ರಮೇಶ್ ಭಟ್ ಕಲ್ಪುರೆಗೆ ತಂಡವೊಂದು ಹಲ್ಲೆ ನಡೆಸಿರುವುದನ್ನು ಖಂಡಿಸಿ ಇಂದು ಬಿಜೆಪಿ ಹಾಗೂ ಸಂಘ ಪರಿವಾರ ಕರೆ ನೀಡಿದ್ದ ಕಡಬ ಬಂದ್ ಕರೆಗೆ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೇಟೆಯಲ್ಲಿ ಒಂದೆರೆಡು ಅಂಗಡಿಗಳು ತೆರೆದಿದ್ದರೂ, ಹೆಚ್ಚಿನ ಅಂಗಡಿಮುಂಗಟ್ಟುಗಳು ಮುಚ್ಚಿದ್ದವು.

ಸಂಘ ಪರಿವಾರದ ಕಾರ್ಯಕತರು ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಜಮಾಯಿಸಿ ಪ್ರತಿಭಟನಾ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಬಿಜೆಪಿ ಹಾಗೂ ಸಂಘ ಪರಿವಾರದ ಮುಖಂಡರು, ರಮೇಶ್‌ಭಟ್ ಅವರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ, ಕಡಬ ಸಿ.ಎ. ಬ್ಯಾಂಕ್ ನಿರ್ದೇಶಕ ಸೀತಾರಾಮ ಗೌಡ ಪೊಸವಳಿಕೆ, ತಾಪಂ ಮಾಜಿ ಅಧ್ಯಕ್ಷೆ ಪುಲಸ್ತ್ಯ ರೈ, ಸತೀಶ್ ನಾಯ್ಕ್, ಪ್ರಕಾಶ್‌ಎನ್.ಕೆ. ಮೊದಲಾದವರು ಉಪಸ್ಥಿತರಿದ್ದರು.

ಪುತ್ತೂರು ಡಿವೈಎಸ್ಪಿಶ್ರೀನಿವಾಸ್, ಉಪ್ಪಿನಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಅನಿಲ್ ಕುಲಕರ್ಣಿ, ಹೆಚ್ಚುವರಿ ಪಡೆಯ ಸರ್ಕಲ್ ಇನ್ ಸ್ಪೆಕ್ಟರ್ ಉಮೇಶ್ ಉಪ್ಪಳಿಕೆ, ಇಂಟೆಲಿಜೆನ್ಸ್ ಇನ್ ಸ್ಪೆಕ್ಟರ್ ನಂದಕುಮಾರ್, ಸಂಪ್ಯ ಸಬ್ ಇನ್ ಸ್ಪೆಕ್ಟರ್ ಖಾದರ್, ಕಡಬ ಸಬ್ ಇನ್ ಸ್ಪೆಕ್ಟರ್ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.

ಬಂದ್ ಕರೆ ಹಿನ್ನೆಲೆಯಲ್ಲಿ ಕಡಬ ಪೇಟೆಯಾದ್ಯಂತ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಹೆಚ್ಚುವರಿ ಪೊಲೀಸರನ್ನು ಪೇಟೆಯಲ್ಲಿ ನಿಯೋಜಿಸಲಾಗಿತ್ತು.

ಕಡಬ ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ರಮೇಶ್‌ಭಟ್ ಕಲ್ಪುರೆ ಅವರ ಮೇಲೆ ರವಿವಾರ ಸಂಜೆ ಕಡಬದ ಯಶೋದಾ ಜನರಲ್ ಸ್ಟೋರ್ ಮುಂಭಾಗದಲ್ಲಿ ದುಷ್ಕರ್ಮಿಗಳ ತಂಡವೊಂದು ತೀವ್ರ ಹಲ್ಲೆ ನಡೆಸಿತ್ತು. ಈ ವೇಳೆ ಹಲ್ಲೆ ಆರೋಪಿಗಳಾದ ಕುಟ್ರುಪ್ಪಾಡಿ ಗ್ರಾಮದ ಕೊಲ್ಯದಕಟ್ಟೆ ಪರಿಸರದ ನಿವಾಸಿಗಳಾದ ಪ್ರಕಾಶ್, ತಿನ್ಸನ್, ಸನೋಷ್, ಲಿಜೊ ಹಾಗೂ ಸಂತೋಶ್ ಎಂಬ ಐವರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಹಲ್ಲೆಯಿಂದ ಮೂಗು ಹಾಗೂ ಎಡಗಣ್ಣಿಗೆ ತೀವ್ರ ಗಾಯಗೊಂಡಿರುವ ರಮೇಶ್ ಭಟ್ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News