ಚಿನ್ನ ಸಾಲ ನೀಡುವಾಗ ಇರಲಿ ಎಚ್ಚರ: ಡಾ.ರಾಜೇಂದ್ರ ಕುಮಾರ್

Update: 2017-07-17 08:16 GMT

ಮಂಗಳೂರು, ಜು.17: ಗ್ರಾಹಕರಿಗೆ ಚಿನ್ನ ಅಡವಿಟ್ಟು ಸಾಲ ನೀಡುವ ವೇಳೆ ಸಹಕಾರಿ ಬ್ಯಾಂಕುಗಳು ನಿಗಾ ಹಾಗೂ ಎಚ್ಚರಿಕೆ ವಹಿಸಬೇಕು ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸಹಕಾರಿ ಬ್ಯಾಂಕ್ ಮುಖ್ಯಸ್ಥರಿಗೆ ಕಿವಿಮಾತು ಹೇಳಿದರು.

ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್‌ನ ಮೊಳಹಳ್ಳಿ ಶಿವರಾವ್ ಸಭಾಭವನದ ಉತ್ಕೃಷ್ಟ ಸಹಕಾರಿ ಸೌಧದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಹಕಾರ ಸಂಘಗಳಲ್ಲಿ ಜಿ.ಎಸ್.ಟಿ. ಅನುಪಾಲನೆ ಕುರಿತು ಸೋಮವಾರ ಆಯೋಜಿಸಲಾಗಿದ್ದ ವಿಶೇಷ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಒಬ್ಬ ವ್ಯಕ್ತಿ ಹಾಗೂ ಆತನ ಸಂಬಂಧಪಟ್ಟವರಿಗೆ ಗರಿಷ್ಠ ಎಷ್ಟು ಸಾಲಗಳನ್ನು ನೀಡಬಹುದು ಎಂಬ ನಿಖರತೆ ಹಾಗೂ ಜಾಗರೂಕತೆ ಸಹಕಾರಿ ಬ್ಯಾಂಕ್‌ಗಳ ಅಧಿಕಾರಿಗಳಿಗೆ ಅಗತ್ಯ. ಇಲ್ಲವಾದಲ್ಲಿ ಈಗಾಗಲೇ ಪಡುಬೆಳ್ಳೆಯ ಪ್ರಕರಣದ ಮೂಲಕ ನಾವೀಗಾಗಲೇ ಸಂಕಷ್ಟ ಅನುಭವಿಸುವಂತಾಗಿದೆ. ಆ ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಯ ಬಂಧನವೂ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಚಿನ್ನ ಸಾಲ ನೀಡಿಕೆ ಬಗ್ಗೆ ಸಹಕಾರಿ ಬ್ಯಾಂಕ್‌ಗಳ ಅಧಿಕಾರಿಗಳು ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದರು.

ಚಿನ್ನ ಸಾಲ ಪಡೆಯುವನ ಬಗ್ಗೆಯೂ ನಮಗೆ ಸಾಕಷ್ಟು ಮಾಹಿತಿ ಅಗತ್ಯ. ಒಬ್ಬನಲ್ಲಿ ಅದೆಷ್ಟು ಚಿನ್ನ ಇರಬಹುದು ಎಂಬ ಬಗ್ಗೆಯೂ ನಾವು ಜಾಗರೂಕತೆ ವಹಿಸಿ ಸಾಲ ನೀಡಬೇಕು ಎಂದು ಅವರು ಹೇಳಿದರು. ಸೊಸೈಟಿಗಳ ಮೂಲಕ ಪಡಿತರ ವಿತರಣೆಗೆ ಸಂಬಂಧಿಸಿ ಎದುರಾಗಿರುವ ಸಮಸ್ಯೆಗಳ ಬಗ್ಗೆಯೂ ಈಗಾಗಲೇ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ನಮಗೆ ಸಾಧ್ಯವಾಗದಿದ್ದಲ್ಲಿ ಈ ಪಡಿತರ ವಿತರಣಾ ವ್ಯವಸ್ಥೆಯಿಂದಲೇ ಹೊರಬರುವ ಬಗ್ಗೆಯೂ ಸೊಸೈಟಿಗಳ ಮುಖ್ಯಸ್ಥರ ಸಲಹೆ, ಸೂಚನೆ, ನಿರ್ಧಾರಗಳ ಮೇರೆಗೆ ಮುಂದುವರಿಯುವುದಾಗಿಯೂ ಅವರು ತಿಳಿಸಿದರು.

ಕಾರ್ಯಾಗಾರದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಡಿ.ಆರ್. ವೆಂಕಟೇಶ್, ಜಿ.ಎಸ್.ಟಿ. ಕುರಿತು ಸಮಗ್ರ ಮಾಹಿತಿ ನೀಡಿದರು. ಒಂದು ದೇಶ, ಒಂದು ತೆರಿಗೆ, ಒಂದು ಮಾರುಕಟ್ಟೆಯ ಮೂಲಕ ದೇಶ ನಿರ್ಮಾಣದ ಪರಿಕಲ್ಪನೆಯೊಂದಿಗೆ ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿದೆ. ಜಿ.ಎಸ್.ಟಿ. ಉತ್ತಮ ತೆರಿಗೆ ಪದ್ಧತಿ, ಆದರೆ ಅದು ಸರಳವಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಜುಲೈ 1ರಿಂದ ಜಾರಿಗೊಂಡಿರುವ ಜಿ.ಎಸ್.ಟಿ.ಯು ಈಗಾಗಲೇ ಉದ್ದಿಮೆ, ವ್ಯವಹಾರಗಳ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಮುಂದಿನ ಮೂರ್ನಾಲ್ಕು ತಿಂಗಳ ಬಳಿಕವಷ್ಟೇ ಜಿಎಸ್‌ಟಿಯ ಸಂಪೂರ್ಣ ಮಾಹಿತಿ, ದರಗಳ ಕುರಿತಂತೆ ಜನಸಾಮಾನ್ಯರಿಗೆ ಹಾಗೂ ಉದ್ದಿಮೆದಾರರ ಅರಿವಿಗೆ ಬರಲಿದೆ ಎಂದು ಅವರು ಹೇಳಿದರು.

20 ಲಕ್ಷ ರೂ.ಗಿಂತ ಮೇಲ್ಪಟ್ಟು ವಾರ್ಷಿಕ ವ್ಯವಹಾರ ಹೊಂದಿರುವ ಎಲ್ಲಾ ವ್ಯಕ್ತಿಗಳು ಜಿಎಸ್‌ಟಿಯಡಿ ನೋಂದಣಿ ಮಾಡಿಕೊಳ್ಳಬೇಕೆಂಬುದು ನಿಯಮ. ಆದರೆ ಕೃಷಿಕನೊಬ್ಬ ತಾನೇ ಸ್ವಂತವಾಗಿ ಬೆಳೆದ ಉತ್ಪನ್ನಗಳಿಗೆ ಮಾರಾಟ ಮಾಡಲು ಈ ನಿಯಮ ಅನ್ವಯವಾಗುವುದಿಲ್ಲ. ಅದರಂತೆಯೇ, ಉದ್ದಿಮೆದಾರರು, 20 ಲಕ್ಷ ರೂ.ದೊಳಗೆ ವ್ಯವಹಾರವನ್ನು ಹೊಂದಿದ್ದರೂ ತಮ್ಮ ವ್ಯವಹಾರ ಅಂತರ್ ರಾಜ್ಯಕ್ಕೆ ಸಂಬಂಧಿಸಿದ್ದಾಗಿದ್ದಲ್ಲಿ ಜಿಎಸ್‌ಟಯಡಿ ನೋಂದಣಿ ಮಾಡಲೇಬೇಕಾಗುತ್ತದೆ. ಈ ವ್ಯವಸ್ಥೆಯಡಿ ವಕೀಲರು ನೋಂದಣಿ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ಆದರೆ ವ್ಯವಹಾರಸ್ಥರೊಬ್ಬರು ವಕೀಲರಿಗೆ ಶುಲ್ಕವನ್ನು ಪಾವತಿಸಬೇಕಿದ್ದಲ್ಲಿ, ಅವರ ವಾರ್ಷಿಕ ವ್ಯವಹಾರ 20 ಲಕ್ಷ ರೂ.ದೊಳಗಿದ್ದರೂ ಕೂಡಾ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಜಿಎಸ್‌ಟಿಯಡಿ ನೋಂದಣಿಗೆ ಜುಲೈ 22ರೊಳಗೆ ಅವಕಾಶವಿದ್ದು, ಮಾಡಿರುವ ನೋಂದಣಿಯನ್ನು ರದ್ದುಪಡಿಸಲು ಜುಲೈ 30ರವರೆಗೆ ಕಾಲಾವಕಾಶ ಒದಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಉದ್ಘಾಟನಾ ಸಮಾರಂಭದಲ್ಲಿ ನಿರ್ದೇಶಕರಾದ ಶಶಿಕುಮಾರ್ ರೈ, ಸದಾಶಿವ ಉಳ್ಳಾಲ್, ಭಾಸ್ಕರ ಎಸ್. ಕೋಟ್ಯಾನ್, ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್ಯ ಉಪಸ್ಥಿತರಿದ್ದರು. ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಪ್ರಭಾರ) ಸತೀಶ್ ಎಸ್. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News