×
Ad

ಪಾಕ್ ಸೇನೆಯಿಂದ ಕದನ ವಿರಾಮ ಉಲ್ಲಂಘನೆ: ಓರ್ವ ಯೋಧ ಹುತಾತ್ಮ; ಬಾಲಕಿ ಮೃತ್ಯು

Update: 2017-07-17 15:24 IST

ಶ್ರೀನಗರ,ಜು.17: ಜಮ್ಮು-ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ ಸೋಮವಾರ ಬೆಳಿಗ್ಗೆ ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನದ ಭಾರೀ ಗುಂಡಿನ ದಾಳಿಯಲ್ಲಿ ಐದರ ಹರೆಯದ ಓರ್ವ ಬಾಲಕಿ ಮತ್ತು ಓರ್ವ ಯೋಧ ಕೊಲ್ಲಲ್ಪಟ್ಟಿದ್ದಾರೆ. ಇದೇ ವೇಳೆ, ಪ್ರತಿದಾಳಿ ನಡೆಸುವ ಹಕ್ಕನ್ನು ತಾನು ಕಾಯ್ದಿರಿಸಿಕೊಂಡಿರುವುದಾಗಿ ಭಾರತವು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.

  ರಾಜೌರಿ ಮತ್ತು ಪೂಂಚ್ ಜಿಲ್ಲೆಗಳಲ್ಲಿಯ ಭಾರತೀಯ ಚೌಕಿಗಳು ಮತ್ತು ಗಡಿಗ್ರಾಮಗಳ ಮೇಲೆ ಪಾಕಿಗಳು ತೀವ್ರ ಶೆಲ್ ದಾಳಿ ನಡೆಸಿದ್ದು, ಓರ್ವ ಯೋಧ ಮತ್ತು ಮಹಿಳೆ ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ. ಇದೇ ವೇಳೆ ಉಭಯ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕ (ಡಿಜಿಎಂಒ)ರು ದೂರವಾಣಿ ಮೂಲಕ ಪರಸ್ಪರ ಮಾತನಾಡಿದ್ದಾರೆ. ಎಲ್ಲ ಕದನ ವಿರಾಮ ಉಲ್ಲಂಘನೆ ಗಳಿಗೆ ಪಾಕಿಸ್ತಾನವೇ ಕಾರಣವಾಗಿದ್ದು, ಪ್ರತಿದಾಳಿಯ ಹಕ್ಕನ್ನು ಭಾರತೀಯ ಸೇನೆಯು ಕಾಯ್ದಿರಿಸಿಕೊಂಡಿದೆ ಎಂದು ಲೆಜಎ.ಕೆ.ಭಟ್ ಅವರು ಪಾಕ್ ಡಿಜಿಎಂಒಗೆ ತಿಳಿಸಿದ್ದಾರೆ.

 ಉಭಯ ಡಿಜಿಎಂಒಗಳ ನಡುವೆ ಸಾಮಾನ್ಯವಾಗಿ ಪ್ರತಿ ಮಂಗಳವಾರ ಮಾತುಕತೆ ನಡೆಯುತ್ತದೆಯಾದರೂ, ಕದನ ವಿರಾಮ ಉಲ್ಲಂಘನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮನವಿಯ ಮೇರೆಗೆ ಈ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಭಿಂಬರ್ ಗಲಿ ವಿಭಾಗದಲ್ಲಿ ತನ್ನ ಬಂಕರ್‌ನಲ್ಲಿ ಕರ್ತವ್ಯನಿರತರಾಗಿದ್ದ ನಾಯ್ಕ ಮುದಸ್ಸರ್ ಅಹ್ಮದ್ ಅವರು ಮಾರ್ಟರ್ ಶೆಲ್ ದಾಳಿಯಲ್ಲಿ ತೀವ್ರವಾಗಿ ಗಾಯ ಗೊಂಡಿದ್ದು, ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.

ಭಿಂಬರ್ ಗಲಿ ವಿಭಾಗವು ರಾಜೌರಿ ಮತ್ತು ಪೂಂಛ್ ಜಿಲ್ಲೆಗಳಲ್ಲಿ ವ್ಯಾಪಿಸಿದೆ. 37ರ ಹರೆಯದ ಅಹ್ಮದ್ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ನಿವಾಸಿಯಾಗಿದ್ದು, ಜಮ್ಮು-ಕಾಶ್ಮೀರ ಲಘು ಪದಾತಿ ದಳ(ಜೆಎಕೆಐ)ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಅಹ್ಮದ್‌ರ ಬಲಿದಾನಕ್ಕಾಗಿ ದೇಶವು ಅವರಿಗೆ ಚಿರಋಣಿಯಾಗಿರುತ್ತದೆ ಎಂದು ಸೇನೆಯು ಹೇಳಿದೆ.ಜೆಎಕೆಐದ ಇನ್ನೋರ್ವ ಯೋಧ ನಾಯ್ಕೋ ಫಿರ್ದೌಸ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪೂಂಛ್ ಜಿಲ್ಲೆಯ ಬಾಲಕೋಟ್‌ನಲ್ಲಿ ಪಾಕ್ ದಾಳಿಯಿಂದ ಐದರ ಹರೆಯದ ಸೈದಾ ಕಫೀಲ್ ಕೌಸರ್ ಕೊಲ್ಲಲ್ಪಟ್ಟರೆ, ರಾಜೌರಿಯಲ್ಲಿ ಶಾಹಬಿ ಎಂಬಾಕೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಳಿಗ್ಗೆ 7:30ರ ಸುಮಾರಿಗೆ ಪಾಕ್ ಸೈನಿಕರು ಭಿಂಬರ್ ಗಲಿ ವಿಭಾಗವನ್ನು ಗುರಿಯಾಗಿಸಿಕೊಂಡು ದಾಳಿಯನ್ನು ಆರಂಭಿಸಿದ್ದು, ಭಾರತೀಯ ಪಡೆಗಳು ಸೂಕ್ತ ಉತ್ತರವನ್ನು ನೀಡುತ್ತಿವೆ ಎಂದು ರಕ್ಷಣಾ ವಕ್ತಾರ ಲೆಕಮನೀಷ್ ಮೆಹ್ತಾ ತಿಳಿಸಿದರು. ದಾಳಿಯ ಹಿನ್ನೆಲೆಯಲ್ಲಿ ರಾಜೌರಿ ಜಿಲ್ಲಾಡಳಿತವು ಗಡಿಗೆ ಸಮೀಪದ ಎಲ್ಲ ಶಾಲೆಗಳನ್ನು ಮುಚ್ಚಿಸಿತ್ತು.

ಕಳೆದ ಕೆಲ ಸಮಯದಿಂದ ನಿಯಂತ್ರಣ ರೇಖೆಯುದ್ದಕ್ಕೂ ಭಾರೀ ಗುಂಡಿನ ಚಕಮಕಿ ನಡೆಯುತ್ತಿದ್ದು, ಉಭಯ ದೇಶಗಳ ಹಲವಾರು ಯೋಧರು ಮತ್ತು ನಾಗರಿಕರು ಬಲಿಯಾಗಿದ್ದಾರೆ.

ಐವರು ಪಾಕ್ ಸೈನಿಕರ ಸಾವು

ರವಿವಾರ ‘ಭಾರತೀಯ ಸೇನೆಯ ಗುರಿಯಾಗಿದ್ದ ’ ತನ್ನ ಸೇನಾವಾಹನವೊಂದು ನೀಲಂ ಕಣಿವೆಯ ಬಳಿ ನದಿಗೆ ಬಿದ್ದ ಪರಿಣಾಮ ಐವರು ಸೈನಿಕರು ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನಿ ಸೇನೆಯು ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ. ಈ ಪೈಕಿ ಓರ್ವನ ಶವವನ್ನು ನದಿಯಿಂದ ಹೊರಗೆ ತೆಗೆಯಲಾಗಿದ್ದು, ಇತರರಿಗಾಗಿ ಶೋಧ ಮುಂದುವರಿದಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News