×
Ad

ಮೈಮೇಲಿನಿಂದ ರೈಲು ಹಾದುಹೋದರೂ ತರಚು ಗಾಯವೂ ಆಗದೆ ಪಾರಾದ ವೃದ್ಧ!

Update: 2017-07-17 17:05 IST

ಭೋಪಾಲ,ಜು.17: ವೃದ್ಧನೋರ್ವನ ಮೈಮೇಲಿನಿಂದ ಭರ್ತಿ ಮೂರು ನಿಮಿಷಗಳ ಕಾಲ ರೈಲು ಹಾದು ಹೋದರೂ ತರಚಿದ ಗಾಯವೂ ಆಗದೆ ಬದುಕುಳಿದಿರುವ ಪವಾಡ ಸದೃಶ ಘಟನೆ ಮಧ್ಯಪ್ರದೇಶದ ಸತ್ನಾ ರೈಲು ನಿಲ್ದಾಣದಲ್ಲಿ ನಡೆದಿದೆ.

ಸತ್ನಾದ ಜವಾಹರ ನಗರ ನಿವಾಸಿ ರಾಧೇಶ್ಯಾಮ ರವಿವಾರ ಸತ್ನಾ ನಿಲ್ದಾಣದಲ್ಲಿ ನಿಂತುಕೊಂಡಿದ್ದ ಗೂಡ್ಸ್ ರೈಲಿನ ಕೆಳಗೆ ತೂರಿಕೊಂಡು ಒಂದು ಪ್ಲಾಟ್‌ಫಾರ್ಮ್‌ನಿಂದ ಇನ್ನೊಂದು ಪ್ಲಾಟ್‌ಫಾರ್ಮ್‌ಗೆ ಹೋಗುವ ಪ್ರಯತ್ನದಲ್ಲಿದ್ದ. ಆಗಲೇ ರೈಲು ಚಲಿಸಲಾ ರಂಭಿಸಿತ್ತು. ತಕ್ಷಣ ತನ್ನ ಕಾಲುಗಳನ್ನು ಹಳಿಗಳಿಗೆ ಸಮಾನಾಂತರವಾಗಿಟ್ಟುಕೊಂಡು ಮಲಗಿದ್ದ ಆತನ ಮೈಮೇಲಿನಿಂದ ಸುಮಾರು ಮೂರು ನಿಮಿಷಗಳ ಕಾಲ ಆ ರೈಲು ಹಾದುಹೋಗಿತ್ತು.

ಈ ಆಘಾತಕಾರಿ ಘಟನೆಯ ಪ್ರತ್ಯಕ್ಷದರ್ಶಿಗಳಾಗಿದ್ದ ಕೆಲವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಅದನ್ನು ಸೆರೆ ಹಿಡಿದಿದ್ದು, ಈ ವೀಡಿಯೊ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಆಗಿದೆ.

ರೈಲು ಹೋದ ತಕ್ಷಣ ಅಲ್ಲಿದ್ದವರು ರಾಧೇಶ್ಯಾಮನಿದ್ದಲ್ಲಿಗೆ ಧಾವಿಸಿ ಆತ ಏಳಲು ನೆರವಾಗಿದ್ದರು. ಆಘಾತದಿಂದ ಆತ ಥರಥರ ನಡುಗುತ್ತಿದ್ದನಾದರೂ ಮೈಗೆ ತರಚಿದ ಗಾಯವೂ ಆಗಿರಲಿಲ್ಲ.

 ಸುದ್ದಿಗಾರರೊಂದಿಗೆ ಮಾತನಾಡಿದ ಆತ, ದೇವರ ದಯೆಯಿಂದ ತಾನು ಬದುಕುಳಿ ದಿದ್ದೇನೆ. ತನಗೇನಾಗಿತ್ತು ಮತ್ತು ತಾನು ರೈಲಿನ ಕೆಳಗೆ ಹೇಗೆ ಬಂದಿದ್ದೆ ಎನ್ನುವುದು ತನಗೆ ಗೊತ್ತಿಲ್ಲ ಎಂದು ಹೇಳಿದ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News