ರೊಹಿಂಗ್ಯ ಮುಸ್ಲಿಮ್ ಪ್ರದೇಶಗಳಲ್ಲಿ ಹಸಿವಿನಿಂದ ಕಂಗೆಟ್ಟ ಜನರು
ಯಾಂಗನ್ (ಮ್ಯಾನ್ಮಾರ್), ಜು. 17: ಪಶ್ಚಿಮ ಮ್ಯಾನ್ಮಾರ್‌ನ ಮುಸ್ಲಿಮ್ ಬಾಹುಳ್ಯದ ಪ್ರದೇಶಗಳಲ್ಲಿ ವಾಸಿಸುತ್ತಿರುವ 80,000ಕ್ಕೂ ಅಧಿಕ ಐದು ವರ್ಷದ ಕೆಳಗಿನ ಮಕ್ಕಳು ಆಹಾರವಿಲ್ಲದೆ ಬಳಲುತ್ತಿದ್ದಾರೆ ಹಾಗೂ ಅವರಿಗೆ ಪೌಷ್ಟಿಕತೆಯ ತೀವ್ರ ಕೊರತೆಗಾಗಿ ಇನ್ನು ಒಂದು ವರ್ಷದ ಅವಧಿಯಲ್ಲಿ ಚಿಕಿತ್ಸೆ ನೀಡಬೇಕಾದ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಘಟಕ ಸಂಸ್ಥೆ ‘ವಿಶ್ವ ಆಹಾರ ಕಾರ್ಯಕ್ರಮ’ ಹೇಳಿದೆ.
ಮ್ಯಾನ್ಮಾರ್‌ನ ರಖೈನ್ ರಾಜ್ಯದ ಪಶ್ಚಿಮದ ಹಳ್ಳಿಗಳಲ್ಲಿರುವ ನಿವಾಸಿಗಳ ಅಧ್ಯಯನ ನಡೆಸಿದ ಬಳಿಕ ವಿಶ್ವ ಆಹಾರ ಸಂಸ್ಥೆಯು ಈ ವರದಿಯನ್ನು ತಯಾರಿಸಿದೆ. ಸೇನೆಯ ಹಿಂಸೆಗೆ ಹೆದರಿ ಸುಮಾರು 75,000 ರೊಹಿಂಗ್ಯ ಮುಸ್ಲಿಮರು ಈ ಹಳ್ಳಿಗಳಿಂದ ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.
ಅಲ್ಲಿ ಈಗ ಉಳಿದಿರುವವರು ಆಹಾರ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಹಿಂಸಾಚಾರದಿಂದ ನಲುಗಿದ ಪ್ರದೇಶಗಳ ಪೈಕಿ ಒಂದಾಗಿರುವ ವೌಂಗ್‌ಡಾವ್ ಜಿಲ್ಲೆಯಲ್ಲಿರುವ ಮೂರನೆ ಒಂದು ಮನೆಗಳು ತೀವ್ರ ಆಹಾರದ ಅಭಾವವನ್ನು ಎದುರಿಸುತ್ತಿವೆ. ಪರಿಸ್ಥಿತಿಯ ತೀವ್ರತೆ ಎಷ್ಟಿದೆಯೆಂದರೆ, ಈ ಮನೆಗಳಲ್ಲಿ ಆಹಾರವೇ ಇಲ್ಲ ಅಥವಾ ಅಲ್ಲಿನ ಸದಸ್ಯರು 24 ಗಂಟೆಗಳ ಅವಧಿಯಲ್ಲಿ ಒಮ್ಮೆಯೂ ಏನೂ ತಿನ್ನುವುದಿಲ್ಲ.
ಇಲ್ಲಿನ ಕಾಲು ಭಾಗ ಮನೆಗಳಲ್ಲಿ ಓರ್ವ ವಯಸ್ಕ ಮಹಿಳೆ ಮಾತ್ರ ಇರುತ್ತಾರೆ. ಸೇನಾ ಕಾರ್ಯಾಚರಣೆಗೆ ಹೆದರಿ ಪುರುಷರು ಮನೆಬಿಟ್ಟು ಓಡಿದ್ದಾರೆ. ಇಂಥ ಮನೆಗಳು ತೀವ್ರ ಹಸಿವಿನಿಂದ ಬಳಲುತ್ತಿವೆ ಎಂದು ವರದಿ ತಿಳಿಸಿದೆ.
ಇಲ್ಲಿ ಎರಡು ವರ್ಷಕ್ಕಿಂತ ಕೆಳಗಿನ ಯಾವುದೇ ಮಕ್ಕಳಿಗೆ ಕನಿಷ್ಠ ಪೌಷ್ಟಿಕಾಂಶಗಳು ಲಭಿಸುತ್ತಿಲ್ಲ ಎಂದು ವರದಿ ಹೇಳಿದೆ ಹಾಗೂ 2,25,000 ಮಂದಿಗೆ ಮಾನವೀಯ ನೆರವಿನ ಅಗತ್ಯವಿದೆ ಎಂದಿದೆ.
‘‘ಪೌಷ್ಟಿಕತೆಯ ತೀವ್ರ ಕೊರತೆಗಾಗಿ ಐದು ವರ್ಷಕ್ಕಿಂತ ಕೆಳಗಿನ 80,500 ಮಕ್ಕಳಿಗೆ ಮುಂದಿನ 12 ತಿಂಗಳ ಅವಧಿಯಲ್ಲಿ ಚಿಕಿತ್ಸೆಯ ಅಗತ್ಯವಿದೆ ಎಂದು ಭಾವಿಸಲಾಗಿದೆ’’ ಎಂದು ವಿಶ್ವ ಆಹಾರ ಕಾರ್ಯಕ್ರಮದ ವರದಿ ತಿಳಿಸಿದೆ.
ತೀವ್ರ ಅಪೌಷ್ಟಿಕತೆಯಿಂದಾಗಿ ಮಕ್ಕಳ ತೂಕ ತೀವ್ರವಾಗಿ ಇಳಿಯುತ್ತದೆ ಹಾಗೂ ಅದರಿಂದ ಸಾವು ಸಂಭವಿಸಬಹುದಾಗಿದೆ. ಅದೂ ಅಲ್ಲದೆ, ಅದು ರೋಗ ನಿರೋಧಕ ವ್ಯವಸ್ಥೆಯ ಕಾರ್ಯವಿಧಾನದಲ್ಲಿ ವ್ಯತ್ಯಯ ಉಂಟುಮಾಡುತ್ತದೆ.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ರೊಹಿಂಗ್ಯ ಮುಸ್ಲಿಮರು ಗಡಿ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿ, ಸೇನೆಯು ರೊಹಿಂಗ್ಯ ಮುಸ್ಲಿಮರ ವಿರುದ್ಧ ಸಮರ ಸಾರಿತ್ತು. ಹೆಲಿಕಾಪ್ಟರ್‌ಗಳನ್ನು ಬಳಸಿ ಅವರ ಹಳ್ಳಿಗಳ ಮೇಲೆ ದಾಳಿ ನಡೆಸಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ನೂರಾರು ರೊಹಿಂಗ್ಯ ಮುಸ್ಲಿಮರು ಮೃತಪಟ್ಟಿದ್ದಾರೆ ಹಾಗೂ ಸಾವಿರಾರು ಮಂದಿ ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.