×
Ad

ರಾಷ್ಟ್ರಪತಿ ಚುನಾವಣೆಗೆ ಮತದಾನ ಅಂತ್ಯ,20ರಂದು ಫಲಿತಾಂಶ

Update: 2017-07-17 20:28 IST

ಹೊಸದಿಲ್ಲಿ,ಜು.17: ಭಾರತದ 14ನೇ ರಾಷ್ಟ್ರಪತಿಯ ಆಯ್ಕೆಗಾಗಿ ಸೋಮವಾರ ದೇಶಾದ್ಯಂತ ಸಂಸದರು ಮತ್ತು ಶಾಸಕರು ಮತದಾನವನ್ನು ಮಾಡಿದರು. ಲೆಕ್ಕಾಚಾರದಂತೆ ಎನ್‌ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರು ಸಾಕಷ್ಟು ಮತಗಳ ಅಂತರದಿಂದ ಪ್ರತಿಪಕ್ಷ ಅಭ್ಯರ್ಥಿ ಮೀರಾ ಕುಮಾರ್ ಅವರನ್ನು ಪರಾಭವಗೊಳಿಸುವ ಸಾಧ್ಯತೆಗಳು ನಿಚ್ಚಳವಾಗಿವೆ.

ಜ.25ರಂದು ಹುದ್ದೆಯಿಂದ ನಿರ್ಗಮಿಸಲಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಉತ್ತರಾಧಿಕಾರಿಯ ಆಯ್ಕೆಗಾಗಿ ದಿಲ್ಲಿಯ ಸಂಸತ್ ಭವನ ಮತ್ತು ರಾಜ್ಯ ವಿಧಾನಸಭೆ ಗಳಲ್ಲಿ ಬೆಳಿಗ್ಗೆ 10 ಗಂಟೆಗೆ ಏಕಕಾಲದಲ್ಲಿ ಆರಂಭಗೊಂಡಿದ್ದ ಮತದಾನ ಪ್ರಕ್ರಿಯೆಯು ಸಂಜೆ ಐದು ಗಂಟೆಗೆ ಮುಕ್ತಾಯಗೊಂಡಿತು.

ಎಲ್ಲ ಚುನಾಯಿತ ಸಂಸದರು ಮತ್ತು ಶಾಸಕರು ರಹಸ್ಯ ಮತದಾನಕ್ಕೆ ಅರ್ಹರಾ ಗಿದ್ದು, ಮತಪತ್ರಗಳಲ್ಲಿ ತಮ್ಮ ಆಯ್ಕೆಯ ಅಭ್ಯರ್ಥಿಗಳನ್ನು ಗುರುತಿಸಲು ಚುನಾವಣಾ ಆಯೋಗವು ಅವರಿಗೆ ವಿಶೇಷ ಪೆನ್ ಒದಗಿಸಿತ್ತು.

ಸುಮಾರು ಶೇ.99ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿ ಅನೂಪ್ ಮಿಶ್ರಾ ತಿಳಿಸಿದರು. ಸಂಸತ್ ಭವನದಲ್ಲಿ ತಮ್ಮ ಮತಗಳನ್ನು ಚಲಾಯಿಸಿದ ಮೊದಲಿಗರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದ್ದರು.

ರಾಷ್ಟ್ರಪತಿ ಚುನಾವಣೆಯ ಮುನ್ನಾದಿನವಾಗಿದ್ದ ರವಿವಾರವೇ ಕೋವಿಂದ್ ಅವರಿಗೆ ‘ಮುಂಗಡವಾಗಿ’ ಅಭಿನಂದನೆಗಳನ್ನು ಕೋರಿದ್ದ ಮೋದಿ, ಅವರಿಗೆ ತನ್ನ ಸರಕಾರದ ಸಂಪೂರ್ಣ ಬೆಂಬಲದ ಭರವಸೆಯನ್ನು ನೀಡಿದ್ದರು.

ರಾಷ್ಟ್ರಪತಿ ಚುನಾವಣೆಗಾಗಿ ಚುನಾವಣಾ ಆಯೋಗವು ಸಂಸತ್ ಭವನದ ಕೊಠಡಿ ಸಂಖ್ಯೆ 62ರಲ್ಲಿ ಒಂದು ಮತ್ತು 31 ರಾಜ್ಯ ವಿಧಾನಸಭೆಗಳಲ್ಲಿ ತಲಾ ಒಂದರಂತೆ ಒಟ್ಟು 32 ಮತಗಟ್ಟೆಗಳನ್ನು ಸ್ಥಾಪಿಸಿತ್ತು.

ಒಟ್ಟು 776 ಸಂಸದರು ಮತ್ತು 4,120 ಶಾಸಕರು ಮತ ಚಲಾಯಿಸಲು ಅರ್ಹರಾ ಗಿದ್ದು, ಮತಗಳ ಒಟ್ಟು ವೌಲ್ಯ 10,98,903 ಆಗಿದೆ. ಎನ್‌ಡಿಎ ಅಭ್ಯರ್ಥಿ ಶೇ.63ರಷ್ಟು ಮತಗಳನ್ನು ಗಳಿಸುವ ನಿರೀಕ್ಷೆಯಿದೆ.

 ಹೆಚ್ಚಿನ ಮತಗಳು ಆಡಳಿತ ಎನಡಿಎ ಬುಟ್ಟಿಯಲ್ಲಿರುವುದರಿಂದ ಬಿಹಾರದ ಮಾಜಿ ರಾಜ್ಯಪಾಲ ಕೋವಿಂದ್ ಅವರು ಮೀರಾ ಕುಮಾರ್‌ಗಿಂತ ಸುಭದ್ರ ಸ್ಥಿತಿಯಲ್ಲಿದ್ದಾರೆ. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಹಿಡಿತದಲ್ಲಿ ಸುಮಾರು ಶೇ.63ರಷ್ಟು ಮತಗಳಿದ್ದರೆ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷವು ಶೇ.35ಕ್ಕಿಂತ ಕೊಂಚ ಹೆಚ್ಚು ಮತಗಳನ್ನು ಹೊಂದಿದೆ. ಶೇ.2ರಷ್ಟು ಮತಗಳನ್ನು ಹೊಂದಿರುವ ಪಕ್ಷೇತರರು ಮತ್ತು ಇತರ ಸಣ್ಣಪುಟ್ಟ ಪಕ್ಷಗಳು ತಮ್ಮ ಆಯ್ಕೆಯ ಅಭ್ಯರ್ಥಿಯನ್ನು ಬಹಿರಂಗಗೊಳಿಸಿಲ್ಲ.

ಆಯ್ಕೆಯಾದರೆ ಕೋವಿಂದ್ ಅವರು ದೇಶದ ಎರಡನೇ ದಲಿತ ರಾಷ್ಟ್ರಪತಿ ಯಾಗಲಿದ್ದಾರೆ. ಮೊದಲ ದಲಿತ ರಾಷ್ಟ್ರಪತಿ ಎಂಬ ಹೆಗ್ಗಳಿಕೆ ಕೆ.ಆರ್.ನಾರಾಯಣನ್ ಅವರದಾಗಿದೆ.

ಮತಗಳ ಎಣಿಕೆಗಾಗಿ ಮತಪೆಟ್ಟಿಗೆಗಳನ್ನು ಜು.20ರಂದು ದಿಲ್ಲಿಗೆ ತರಲಾಗುತ್ತಿದ್ದು, ಅದೇ ದಿನ ಫಲಿತಾಂಶ ಘೋಷಣೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News