ವಿವಿಐಪಿ ಹೆಲಿಕಾಪ್ಟರ್ ಹಗರಣ: ಶಿವಾನಿ ಸಕ್ಸೇನ ಬಂಧನ
ಹೊಸದಿಲ್ಲಿ, ಜು.17: ವಿವಿಐಪಿ ಹೆಲಿಕಾಪ್ಟರ್ ಹರಗಣಕ್ಕೆ ಸಂಬಂಧಿಸಿದ 3,600 ಕೋಟಿ ರೂ.ಮೊತ್ತದ ಹಣ ಚಲುವೆ ಪ್ರಕರಣದಲ್ಲಿ ದುಬೈ ಮೂಲದ ಎರಡು ಸಂಸ್ಥೆಗಳ ನಿರ್ದೇಶಕಿ ಶಿವಾನಿ ಸಕ್ಸೇನರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ.
ಈ ಹಗರಣದಲ್ಲಿ ಅಕ್ರಮ ವ್ಯವಹಾರದ ಮೂಲಕ ಆದಾಯ ಪಡೆದ ಆರೋಪದಲ್ಲಿ ಶಿವಾನಿಯನ್ನು ಬಂಧಿಸಲಾಗಿದ್ದು ನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈಕೆ ಯುಎಚ್‌ವೈ ಸಕ್ಸೇನಾ ಸಮೂಹ ಸಂಸ್ಥೆ ಮತ್ತು ಮ್ಯಾಟ್ರಿಕ್ಸ್ ಹೋಲ್ಡಿಂಗ್ಸ್ ಸಂಸ್ಥೆಗಳ ನಿರ್ದೇಶಕಿ. ಹಣ ಚಲುವೆ ತಡೆ ಕಾಯ್ದೆಯ ಅನ್ವಯ ಶಿವಾನಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ವಾಯುಪಡೆಗೆ 12 ಎಡಬ್ಲು-101 ವಿವಿಐಪಿ ಹೆಲಿಕಾಪ್ಟರ್‌ಗಳನ್ನು ಪೂರೈಸುವ ಬಗ್ಗೆ ಆಗಸ್ಟವೆಸ್ಟ್‌ಲ್ಯಾಂಡ್ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು 2014ರ ಜನವರಿ 1ರಂದು ರದ್ದುಗೊಳಿಸಲಾಗಿತ್ತು. ಈ ಗುತ್ತಿಗೆಯನ್ನು ಪಡೆಯಲು 423 ಕೋಟಿ ರೂ. ಲಂಚವನ್ನು ಮಧ್ಯವರ್ತಿಗೆ ಸಂದಾಯ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಒಪ್ಪಂದವನ್ನು ರದ್ದುಗೊಳಿಸಲಾಗಿತ್ತು.