ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳ ವಿದ್ಯಾರ್ಥಿಗಳಿಗಾಗಿ ಖಾಸಗಿ ಸಂಸ್ಥೆಗಳಿಂದ ವಿದ್ಯಾರ್ಥಿ ನಿಲಯ: ಜೆ.ಆರ್.ಲೋಬೊ

Update: 2017-07-18 12:20 GMT

ಮಂಗಳೂರು, ಜು.18: ರಾಜ್ಯದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಾದ ಬೀದರ್, ಗುಲ್ಭರ್ಗ ಮೊದಲಾದ ಜಿಲ್ಲೆಗಳ ಶೈಕ್ಷಣಿಕ ಮಟ್ಟವನ್ನು ಉತ್ತಮ ಪಡಿಸಲು ಜಿಲ್ಲೆಯ ಖಾಸಗಿ ಸಂಸ್ಥೆಗಳು ಅವರಿಗೆ ದ.ಕ ಜಿಲ್ಲೆಯಲ್ಲಿ ವಿದ್ಯಾರ್ಥಿ ನಿಲಯವನ್ನು ಆರಂಭಿಸಲು ಮುಂದೆ ಬರಬೇಕು ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದ್ದಾರೆ.

ದ.ಕ ಜಿಲ್ಲಾ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಹಾಗೂ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರ ಸಂಘದ ವತಿಯಿಂದ ಇಂದು ನಗರದ ಅತ್ತಾವರದ ಎಸ್.ಎಂ.ಕುಶೆ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡ ಶೈಕ್ಷಣಿಕ ಸಮಾವೇಶ ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿನ ಶೈಕ್ಷಣಿಕ ಮಟ್ಟ ಇತರ ಜಿಲ್ಲೆಗಳಿಂದ ತುಂಬಾ ಮುಂದಿದೆ. ಮಂಗಳೂರಿನಲ್ಲಿ ಕ್ರೈಸ್ತ ಮಿಶನರಿಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಅದೇ ರೀತಿ ಇತರ ಖಾಸಗಿ ಸಂಸ್ಥೆಗಳು ಶಿಕ್ಷಣಕ್ಕೆ ಪ್ರೊತ್ಸಾಹ ನೀಡುತ್ತಾ ಬಂದಿರುವುದು ಇಲ್ಲಿನ ಶೈಕ್ಷಣಿಕ ಬೆಳವಣಿಗೆಗೆ ಕಾರಣವಾಗಿದೆ. ರಾಜ್ಯದ ಇತರ ಜಿಲ್ಲೆಗಳ ಶೈಕ್ಷಣಿಕ ಮಟ್ಟವನ್ನು ಉತ್ತಮ ಪಡಿಸಲು ಇಲ್ಲಿನ ಖಾಸಗಿ ಸಂಸ್ಥೆಗಳು ಇತರ ಜಿಲ್ಲೆಗಳ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯವನ್ನು ಆರಂಭಿಸಬೇಕು. ಇಲ್ಲಿ ಅಧ್ಯಯನ ನಡೆಸಿದವರು ಮುಂದೆ ತಮ್ಮ ಜಿಲ್ಲೆಗಳ ಶೈಕ್ಷಣಿಕ ಮಟ್ಟವನ್ನು ಉತ್ತಮ ಪಡಿಸುವ ರಾಯಭಾರಿಗಳಾಗಬೇಕು ಎನ್ನುವ ಚಿಂತನೆಯನ್ನು ಶಾಸಕ ಜೆ.ಆರ್.ಲೋಬೊ ಶೈಕ್ಷಣಿಕ ಸಮಾವೇಶದಲ್ಲಿ ಸಭೆಯ ಮುಂದಿಟ್ಟರು.

ಜಿಲ್ಲೆ ಶೈಕ್ಷಣಿಕವಾಗಿ ಮುಂದಿದೆ, ಜಾಗತಿಕ ಮಟ್ಟದಲ್ಲೂ ಜೀವಿಸಲು ಯೋಗ್ಯವಾದ ನಗರಗಳ ಪೈಕಿ ಮಂಗಳೂರು 7 ನೆ ಸ್ಥಾನ ಪಡೆದಿದೆ. ಜಿಲ್ಲೆಯ ಹೊರಗಿನ ಜನರಿಂದ ಮಂಗಳೂರು ಸುರಕ್ಷಿತ ಪ್ರದೇಶವಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೋಮು ದ್ವೇಷ ,ಜಾತಿ ಜಾತಿಗಳ ನಡುವಿನ ದ್ವೇಷದ ವಾತಾವರಣ ದಿಂದ ಜಿಲ್ಲೆಗೆ ಕಳಂಕ ಬರುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ .ಈ ಪರಿಸ್ಥಿತಿ ಬದಲಾಗಬೇಕು. ಆರೋಗ್ಯಕರ ಸಮಾಜ ನಿರ್ಮಾಣದ ವಾತವರಣ ಶಾಲೆಗಳಿಂದ ಆರಂಭವಾಗಬೇಕು ಎಂದು ಜೆ.ಆರ್.ಲೋಬೊ ತಿಳಿಸಿದರು.

ಶಾಲಾ ತರಗತಿ ಕೊಠಡಿಗಳು ವಿದ್ಯಾರ್ಥಿಗಳ ಧ್ವನಿಗಳಿಗೆ ವೇದಿಕೆಯಾಗಬೇಕು:-

ಪ್ರಸಕ್ತ ದಿನಗಳಲ್ಲಿ ಶಾಲೆಗಳಲ್ಲಿ ಶಿಸ್ತಿನ ಹೆಸರಿನಲ್ಲಿ ವಿದ್ಯಾರ್ಥಿಗಳ ಧ್ವನಿಗಳಿಗೆ ಕಿವಿಗೊಡದೆ  ಮೌನವನ್ನು ಕಾಪಾಡುತ್ತಿರುವುದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಲಾರದು ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಆಂಗ್ಲಭಾಷಾ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಡಾ.ರವಿಶಂಕರ್ ತಿಳಿಸಿದರು.

ಶಿಕ್ಷಕರು ಕೇವಲ ವಿಷಯವನ್ನು ಬೋಧಸುವವರು ಮಾತ್ರ ಆಗಬಾರದು , ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ಆಲಿಸುವವರಾಗಬೇಕು ಆಗ ಶಾಲೆಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಲು ಸಾಧ್ಯವಾಗುತ್ತದೆ. ಶಾಲೆಗಳಲ್ಲಿ ಮಹಿಳಾ ಸಬಲೀಕರಣದ ವಿಚಾರಗಳಿಗೆ ಒತ್ತು ನೀಡುವ ಲಿಂಗ ಸಮಾನತೆಯನ್ನು ಸಾರುವ, ಪ್ರಜಾಪ್ರಭುತ್ವ ಮಾದರಿಯ ಮೌಲ್ಯಗಳಿಗೆ ಒತ್ತು ನೀಡುವ ಕೆಲಸಗಳು ಹೆಚ್ಚು ಹೆಚ್ಚು ಆಗ ಬೇಕು ಎಂದು ರವಿಶಂಕರ್ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ನಿಕ್ ವಹಿಸಿದ್ದರು. ವೇದಿಕೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೈ.ಶಿವರಾಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಎಸ್.ಎಂ.ಕುಶೆ ಕಾಲೇಜಿನ ಪ್ರಾಂಶುಪಾಲ ಕೆ.ಕೆ.ಉಪಾಧ್ಯಾಯ, ದ.ಕ ಜಿಲ್ಲಾ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಹಾಗೂ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಡಾ.ಇಸ್ಮಾಯಿಲ್, ಕಾರ್ಯದರ್ಶಿ ಉಷಾ.ಎಚ್.ಬಲ್ಲಾಳ್, ಉಪಾಧ್ಯಕ್ಷ ಉಮೇಶ್ ಕರ್ಕೇರ, ಜಯಶ್ರೀ ಮತ್ತು ಜೊತೆ ಕಾರ್ಯದರ್ಶಿ ಮಹೇಶ್ ಶೆಟ್ಟಿ, ಕೆ.ಎಸ್.ಆರ್.ಟಿ.ಸಿ ಆಡಳಿತ ಮಂಡಳಿಯ ನಿರ್ದೇಶಕ ಟಿ.ಕೆ.ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News