2022ರ ವೇಳೆಗೆ ಜಗತ್ತಿನಲ್ಲಿ 550 ಕೋಟಿ ಮೊಬೈಲ್ ಫೋನ್‌ಗಳು

Update: 2017-07-18 13:44 GMT

ಲಂಡನ್, ಜು. 18: ಏಶ್ಯ-ಪೆಸಿಫಿಕ್ ವಲಯದಲ್ಲಿ, ಅದರಲ್ಲೂ ಮುಖ್ಯವಾಗಿ ಭಾರತ ಮತ್ತು ಚೀನಾಗಳಲ್ಲಿ ಮೊಬೈಲ್ ಫೋನ್‌ಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, 2022ರ ವೇಳೆಗೆ ಜಾಗತಿಕ ಜನಸಂಖ್ಯೆಯ 70 ಶೇಕಡದಷ್ಟು ಜನರನ್ನು ಮೊಬೈಲ್ ಫೋನ್‌ಗಳು ತಲುಪುತ್ತವೆ. ಇದು 2008ರಲ್ಲಿ ಇದ್ದ ಒಟ್ಟು ಮೊಬೈಲ್ ಬಳಕೆದಾರರ ಸಂಖ್ಯೆಯ ದುಪ್ಪಟ್ಟಾಗಿದೆ.

2022ರ ವೇಳೆಗೆ ಜಾಗತಿಕವಾಗಿ 550 ಕೋಟಿಗೂ ಅಧಿಕ ಜನರು ಮೊಬೈಲ್ ಫೋನ್‌ಗಳನ್ನು (ಸ್ಮಾರ್ಟ್‌ಫೋನ್‌ಗಳು ಮತ್ತು ಪ್ರಾಥಮಿಕ ಫೋನ್‌ಗಳು ಸೇರಿ) ಬಳಸುತ್ತಾರೆ ಎಂದು ನಿರೀಕ್ಷಿಸಲಾಗಿದೆ ಎಂದು ‘ಫಾರೆಸ್ಟರ್’ ವರದಿ ಮಾಡಿದೆ.

‘‘2022ರ ವೇಳೆಗೆ, ಸ್ಮಾರ್ಟ್‌ಫೋನ್‌ಗಳ ಜಾಗತಿಕ ಬಳಕೆದಾರರ ಸಂಖ್ಯೆ380 ಕೋಟಿ ತಲುಪಲಿದೆ ಎಂದು ನಾವು ನಿರೀಕ್ಷಿಸುತ್ತೇವೆ’’ ಎಂದು ಜಾಗತಿಕ ಸಂಶೋಧನಾ ಸಂಸ್ಥೆ ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಸ್ಮಾರ್ಟ್‌ಫೋನ್ ಬಳಕೆದಾರರ ಪೈಕಿ ಸುಮಾರು 94 ಶೇಕಡ ಆ್ಯಂಡ್ರಾಯಿಡ್ ಅಥವಾ ಐಒಎಸ್ (ಐಫೋನ್) ಫೋನ್‌ಗಳನ್ನು ಬಳಸುತ್ತಿದ್ದಾರೆ.

ಈ ಪೈಕಿ ಆ್ಯಂಡ್ರಾಯಿಡ್ 2017ರಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯ 73 ಶೇ. ಪಾಲನ್ನು (180 ಕೋಟಿಗೂ ಅಧಿಕ ಬಳಕೆದಾರರು) ಪಡೆಯುತ್ತದೆ ಎಂದು ನಿರೀಕ್ಷಿಸಲಾಗಿದೆ. ಎರಡನೆ ಸ್ಥಾನದಲ್ಲಿ ಐಫೋನ್ (21 ಶೇಕಡ) ಇದ್ದರೆ, ಮೂರನೆ ಸ್ಥಾನದಲ್ಲಿ ವಿಂಡೋಸ್ (4 ಶೇಕಡ) ಇವೆ.

5-6 ಇಂಚು ಗಾತ್ರದ ಮೊಬೈಲ್‌ಗಳಿಗೆ ಬೇಡಿಕೆ

‘‘ಡೊಡ್ಡ ಗಾತ್ರದ ಸ್ಮಾರ್ಟ್‌ಫೋನ್‌ಗಳ ಹೆಚ್ಚಿನ ಬಳಕೆಯಿಂದಾಗಿ ಟ್ಯಾಬ್ಲೆಟ್‌ಗಳ ಬಳಕೆ ಕಡಿಮೆಯಾಗುತ್ತಿದೆ. ಚೀನಾ ಮತ್ತು ಭಾರತದ ಮೆಟ್ರೊ ನಗರಗಳಲ್ಲಿ ಕ್ರಮವಾಗಿ 65 ಶೇ. ಮತ್ತು 62 ಶೇ. ವಯಸ್ಕ ಸ್ಮಾರ್ಟ್‌ಫೋನ್ ಬಳಕೆದಾರರು 5 ಮತ್ತು 6 ಇಂಚುಗಳ ನಡುವಿನ ಗಾತ್ರದ ಪರದೆಯ ಫೋನ್‌ಗಳನ್ನು ಬಳಸುತ್ತಿದ್ದಾರೆ’’ ಎಂದು ‘ಫಾರೆಸ್ಟರ್’ ಕಂಡುಕೊಂಡಿದೆ.

ಭಾರತದಲ್ಲಿ ಪ್ರಸಕ್ತ 30 ಕೋಟಿಗೂ ಅಧಿಕ ಸ್ಮಾರ್ಟ್‌ಫೋನ್ ಬಳಕೆದಾರರಿದ್ದಾರೆ.

ಅದೇ ವೇಳೆ, ಭಾರತದಲ್ಲಿ ಸ್ಮಾರ್ಟ್‌ಫೋನ್ ಮತ್ತು ಪ್ರಾಥಮಿಕ ಫೋನ್ (ಫೀಚರ್ ಫೋನ್)ಗಳ ಬಳಕೆದಾರರ ಒಟ್ಟು ಸಂಖ್ಯೆ 100 ಕೋಟಿಯನ್ನು ದಾಟಿದೆ ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News