ರಾಜ್ಯಸಭೆಯಲ್ಲಿ ವಿಪಕ್ಷಗಳ ಆರೋಪ, ಪ್ರತಿಭಟನೆ
ಹೊಸದಿಲ್ಲಿ, ಜು.18: ದಲಿತರ ದೌರ್ಜನ್ಯದ ಕುರಿತು ಮಾತನಾಡಲು ಸಾಕಷ್ಟು ಸಮಯಾವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಆಕ್ರೋಶಗೊಂಡ ಮಾಯಾವತಿ ರಾಜೀನಾಮೆ ಬೆದರಿಕೆ, ವಿಷಯ ಚರ್ಚಿಸಲು ಅನುಮತಿ ದೊರಕದ ಕಾರಣ ಕಾಂಗ್ರೆಸ್ ಸದಸ್ಯರ ಸಭಾತ್ಯಾಗ .. ಇವು ಮಂಗಳವಾರ ರಾಜ್ಯಸಭಾ ಕಲಾಪದ ಸಂದರ್ಭ ನಡೆದ ವಿದ್ಯಮಾನಗಳು.
ರಾಜೀನಾಮೆಗೆ ಮುಂದಾದ ಮಾಯಾವತಿಯವರನ್ನು ಸಮಾಧಾನಪಡಿಸಲು ಯತ್ನಿಸಿದ ಉಪ ಸಭಾಧ್ಯಕ್ಷ ಕುರಿಯನ್, ತನ್ನ ಆಸನದಿಂದ ಎದ್ದು ಬಂದರು. ನಿಯಮ 267ರಡಿ ನೋಟಿಸ್ ನೀಡಿದ ಬಳಿಕ ಮಾಯಾವತಿಗೆ ಮಾತು ಮುಂದುವರಿಸಲು ಅವಕಾಶ ನೀಡಲಾಗುವುದು ಎಂದು ಕುರಿಯನ್ ತಿಳಿಸಿದರು. ಆದರೆ ತನ್ನ ಸಮುದಾಯವರ ಹಕ್ಕುಗಳನ್ನು ರಕ್ಷಿಸಲು ಆಗುವುದಿಲ್ಲ ಎಂದಾದ ಮೇಲೆ ಸದನದಲ್ಲಿ ಇರಲು ತನಗೆ ಯಾವ ಹಕ್ಕೂ ಇಲ್ಲ ಎಂದು ಮಾಯಾವತಿ ಹೇಳಿದರು. ನಾನು ರಾಜೀನಾಮೆ ನೀಡುವುದಾಗಿ ಆಕ್ರೋಶದಿಂದ ನುಡಿದು ಸದನದಿಂದ ಹೊರನಡೆದರು.
ಬಿಸ್ಪಿಯ ಸದಸ್ಯ ಸತೀಶ್ ಮಿಶ್ರ ಕೂಡಾ ಮಾಯಾವತಿಯನ್ನು ಅನುಸರಿಸಿದರೂ ಸ್ವಲ್ಪ ಹೊತ್ತಲ್ಲೇ ಸದನಕ್ಕೆ ಮರಳಿ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಸರಕಾರ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದವರು ಆರೋಪಿಸಿದರು.
ಮಾಯಾವತಿ ಸದನದ ಪೀಠಕ್ಕೆ ಬೆದರಿಕೆ ಹಾಕಿದ್ದು ಅವರು ಕ್ಷಮೆ ಕೋರಬೇಕು ಎಂದು ಸಂಸದೀಯ ವ್ಯವಹಾರ ಇಲಾಖೆಯ ಸಹಾಯಕ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದರು. ಇದರಿಂದ ಕೆರಳಿದ ಬಿಎಸ್ಪಿ ಶಾಸಕರು - ದಲಿತ್ ವಿರೋಧಿ ಸರಕಾರವನ್ನು ಸಹಿಸಲಾಗದು ಎಂದು ಘೋಷಣೆ ಕೂಗುತ್ತಾ ಸದನದ ಬಾವಿಯತ್ತ ಧಾವಿಸಿದರು.
ಈ ವೇಳೆ ಮಾತನಾಡಿದ ವಿಪಕ್ಷದ ಮುಖಂಡ ಗುಲಾಂ ನಬಿ ಆಝಾದ್ , ಸದನದಲ್ಲಿ ವಿಪಕ್ಷಗಳು ಬಯಸಿದ ವಿಷಯದಲ್ಲಿ ಚರ್ಚೆ ನಡೆಸಬಹುದು ಎಂದು ಸರಕಾರ ಸರ್ವಪಕ್ಷಗಳ ಸಭೆಯಲ್ಲಿ ತಿಳಿಸಿತ್ತು. ಆದರೆ ಪ್ರಧಾನಿಯವರ ಸಮ್ಮುಖದಲ್ಲಿ ನೀಡಿದ್ದ ಆಶ್ವಾಸನೆಗೆ ವಿರುದ್ಧವಾಗಿ ನೀವು ನಡೆದುಕೊಳ್ಳುತ್ತಿದ್ದೀರಿ . ರೈತರ ಸಮಸ್ಯೆ, ದಲಿತ ವಿರೋಧಿ ಪ್ರಕರಣ, ಅಲ್ಪಸಂಖ್ಯಾತರ ಮೇಲಿನ ಹಲ್ಲೆ- ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲು ಕಾಂಗ್ರೆಸ್ ನೇತೃತ್ಬದಲ್ಲಿ ವಿಪಕ್ಷಗಳು ನೋಟಿಸ್ ನೀಡಿದ್ದವು ಎಂದರು.
ಈ ವೇಳೆ - ಜನತೆಯ ತೀರ್ಮಾನವನ್ನು ಗೌರವಿಸಿ- ಎಂಬ ಘೋಷಣೆ ಆಡಳಿತ ಪಕ್ಷಗಳ ಸಾಲಿನಿಂದ ಕೇಳಿ ಬಂದಿತು. ಇದಕ್ಕೆ ಪ್ರತಿಕ್ರಿಯಿಸಿದ ಆಝಾದ್, ಅಲ್ಪಸಂಖ್ಯಾತರು ಮತ್ತು ದಲಿತರ ಮೇಲೆ ದೌರ್ಜನ್ಯ ನಡೆಸಲು ನಿಮಗೆ ಜನತೆ ಅಧಿಕಾರ ನೀಡಿಲ್ಲ ಎಂದು ಹೇಳಿದ ಆಝಾದ್, ಪ್ರತಿಭಟನೆಯ ಸೂಚಕವಾಗಿ ಕಾಂಗ್ರೆಸ್ ಸದನವನ್ನು ಬಹಿಷ್ಕರಿಸುತ್ತದೆ ಎಂದರು. ಬಳಿಕ ಕಾಂಗ್ರೆಸ್ ಸದಸ್ಯರು ಸದನವನ್ನು ಬಹಿಷ್ಕರಿಸಿದರು.
ಸರಕಾರದ ಧೋರಣೆ ರೈತರನ್ನು ಆತ್ಮಹತ್ಯೆಯತ್ತ ಪ್ರೇರೇಪಿಸುತ್ತಿದೆ ಎಂದು ಸಿಪಿಐ(ಎಂ) ಮುಖಂಡ ಸೀತಾರಾಂ ಯೆಚೂರಿ ದೂರಿದರು. ಈ ವೇಳೆ ಮಧ್ಯಪ್ರವೇಶಿಸಿದ ನಖ್ವಿ, ವಿಪಕ್ಷಗಳು ನೋಟಿಸ್ ನೀಡಿದರೆ ಸರಕಾರ ಯಾವುದೇ ವಿಷಯದ ಬಗ್ಗೆ ಚರ್ಚೆಗೆ ಸಿದ್ದ ಎಂದರು. ಸರಕಾರ ಚರ್ಚೆಗೆ ಸಿದ್ಧವಿರುವುದಾಗಿ ತಿಳಿಸಿದೆ. ಆದ್ದರಿಂದ ವಿಪಕ್ಷ ಸದಸ್ಯರು ತಮ್ಮ ಆಸನಕ್ಕೆ ಮರಳಬೇಕು ಎಂದು ಕುರಿಯನ್ ಹೇಳಿದರು. ಆದರೆ ವಿಪಕ್ಷ ಸದಸ್ಯರು ಇದಕ್ಕೆ ಸಮ್ಮತಿಸದಿದ್ದಾಗ ಸದನವನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು.