ಪಾಕ್ ಪಡೆಗಳಿಂದ ಶೆಲ್ ದಾಳಿ: ಶಾಲೆಯಲ್ಲಿ ಸಿಕ್ಕಿಹಾಕಿಕೊಂಡ 50 ವಿದ್ಯಾರ್ಥಿಗಳು
ಜಮ್ಮು,ಜು.17: ಜಮ್ಮುಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾ ವಲಯದಲ್ಲಿ ಪಾಕ್ ಪಡೆಗಳು ಮಂಗಳವಾರ ಮೋರ್ಟಾರ್ ಶೆಲ್‌ಗಳಿಂದ ಭಾರೀ ದಾಳಿ ನಡೆಸಿದ್ದು, ಅಲ್ಲಿನ ಸರಕಾರಿ ಹೈಸ್ಕೂಲ್‌ವೊಂದರಲ್ಲಿ 50 ಮಂದಿ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದಾಗ್ಯೂ ಶೆಲ್‌ದಾಳಿಯಲ್ಲಿ ಸಿಲುಕಿಕೊಂಡಿದ್ದ ಪ್ರಾಥಮಿಕ ಶಾಲೆಯೊಂದರ 12 ಮಂದಿ ಮಕ್ಕಳನ್ನು ರಕ್ಷಿಸುವಲ್ಲಿ ಭದ್ರತಾಪಡೆಗಳು ಯಶಸ್ವಿಯಾಗಿವೆ.
ಶೆಲ್‌ದಾಳಿಗೆ ತುತ್ತಾಗಿರುವ ಶಾಲೆಯು ಎತ್ತರವಾದ ಪ್ರದೇಶದಲ್ಲಿರುವುದರಿಂದ ವಿದ್ಯಾರ್ಥಿಗಳನ್ನು ತೆರವುಗೊಳಿಸುವ ಕಾರ್ಯ ಕಷ್ಟಕರವಾಗಿದೆಯೆಂದು ಅವರು ತಿಳಿಸಿದ್ದಾರೆ.
ಆದಾಗ್ಯೂ ಪೊಲೀಸರು ಹಾಗೂ ಭದ್ರತಾಪಡೆಗಳು ನೌಶೇರಾದ ಕಡಾಲಿ ಪ್ರದೇಶದಲ್ಲಿರುವ ಪ್ರಾಥಮಿಕ ಶಾಲೆಯಿಂದ 12 ವಿದ್ಯಾರ್ಥಿಗಳನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಗಿವೆ.
ಪಾಕ್ ಪಡೆಗಳ ನಿರಂತರವಾದ ಶೆಲ್ ದಾಳಿಯ ನಡುವೆಯೂ ಮಕ್ಕಳನ್ನು ಶಾಲಾಕಟ್ಟಡದಿಂದ ತೆರವುಗೊಳಿಸಿ ಬುಲೆಟ್‌ಪ್ರೂಫ್ ವಾಹನಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲಾಯಿತೆಂದು ರಜೌರಿಯ ಜಿಲ್ಲಾಧಿಕಾರಿ ಶಹೀದ್ ಇಕ್ಬಾಲ್ ಚೌಧುರಿ ತಿಳಿಸಿದ್ದಾರೆ.
ರಜೌರಿ-ಪೂಂಚ್ ವಲಯದಲ್ಲಿ ಸೋಮವಾರ ಪಾಕ್ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ 9 ವರ್ಷ ಬಾಲಕಿ ಹಾಗೂ ಓರ್ವ ಭಾರತೀಯ ಯೋಧ ಮೃತಪಟ್ಟಿದ್ದರು.