ಸ್ವಿಝರ್‌ಲ್ಯಾಂಡ್: 75 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ದಂಪತಿಯ ಮಂಜುಗಟ್ಟಿದ ದೇಹಗಳು ಪತ್ತೆ

Update: 2017-07-18 16:56 GMT

ಜಿನೇವ (ಸ್ವಿಟ್ಸರ್‌ಲ್ಯಾಂಡ್), ಜು. 18: ಆಲ್ಪ್ಸ್ ಪರ್ವತಶ್ರೇಣಿಯಲ್ಲಿ 75 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಸ್ವಿಟ್ಸರ್‌ಲ್ಯಾಂಡ್‌ನ ದಂಪತಿಯ ಮಂಜುಗಟ್ಟಿದ ದೇಹಗಳು ನೀರ್ಗಲ್ಲೊಂದರಲ್ಲಿ ಪತ್ತೆಯಾಗಿವೆ ಎಂದು ಸ್ವಿಸ್ ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.

ಏಳು ಮಕ್ಕಳ ಹೆತ್ತವರಾಗಿದ್ದ ಮಾರ್ಸಿಲಿನ್ ಮತ್ತು ಫ್ರಾನ್ಸೈನ್ ಡುಮೂಲಿನ್ 1942 ಆಗಸ್ಟ್ 15ರಂದು ವಲಾಯಿಸ್ ಕ್ಯಾಂಟನ್‌ನಲ್ಲಿರುವ ಚಾಂಡೋಲಿನ್ ಗ್ರಾಮದ ಮೇಲ್ಭಾಗದಲ್ಲಿರುವ ಹುಲ್ಲುಗಾವಲೊಂದಕ್ಕೆ ತಮ್ಮ ಹಸುಗಳ ಹಾಲು ಕರೆಯಲು ಹೋಗಿದ್ದರು. ಆ ಬಳಿಕ ಅವರು ಹಿಂದಿರುಗಿಲ್ಲ.

40 ವರ್ಷದ ಮಾರ್ಸಿಲಿನ್ ಚಪ್ಪಲಿ ತಯಾರಕರಾಗಿದ್ದರು ಹಾಗೂ 37 ವರ್ಷದ ಫ್ರಾನ್ಸೈನ್ ಶಿಕ್ಷಕಿಯಾಗಿದ್ದರು.

ಕಳೆದ ವಾರ ಕಾರ್ಮಿಕರೊಬ್ಬರು ಸಾನ್‌ಫ್ಲೆರೊನ್ ನೀರ್ಗಲ್ಲಿನಲ್ಲಿ ಕೆಲಸ ಮಾಡುತ್ತಿದ್ದಾಗ 2,615 ಮೀಟರ್ ಎತ್ತರದಲ್ಲಿ ಈ ದೇಹಗಳು ಪತ್ತೆಯಾಗಿವೆ. ಅವರ ಗುರುತುಪತ್ರಗಳೂ ಅಲ್ಲೇ ಪತ್ತೆಯಾಗಿವೆ.

‘‘ನಾವು ನಮ್ಮ ಇಡೀ ಬದುಕನ್ನು ಅವರಿಗಾಗಿ ಕಾಯುತ್ತಾ ಕಳೆದೆವು. ಅವರಿಗೆ ಸರಿಯಾದ ಅಂತ್ಯಸಂಸ್ಕಾರ ಮಾಡಲು ನಮಗೆ ಸಾಧ್ಯವಾಗುತ್ತದೆ ಎಂಬ ಭರವಸೆಯನ್ನು ನಾವು ಹೊಂದಿದ್ದೆವು’’ ಎಂದು ದಂಪತಿಯ ಕೊನೆಯ ಮಗಳು 79 ವರ್ಷದ ಮಾರ್ಸಿಲಿನ್ ಉಡ್ರಿ ಡುಮೂಲಿನ್ ‘ಲೆ ಮಾಟಿನ್’ ಪತ್ರಿಕೆಗೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News