×
Ad

ಗೋವಾಕ್ಕೆ ಗೋಮಾಂಸ ಕೊರತೆಯಾದರೆ ಕರ್ನಾಟಕದಿಂದ ಆಮದು: ಪಾರಿಕ್ಕರ್

Update: 2017-07-18 23:44 IST

 ಪಣಜಿ, ಜು.18: ರಾಜ್ಯದಲ್ಲಿ ಗೋಮಾಂಸದ ಕೊರತೆಯಾಗದು. ಅಗತ್ಯ ಬಿದ್ದರೆ ನೆರೆಯ ರಾಜ್ಯವಾದ ಕರ್ನಾಟಕದಿಂದ ಗೋಮಾಂಸವನ್ನು ಖರೀದಿಸಲಾಗುತ್ತದೆ ಎಂದು ಗೋವ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಹೇಳಿದ್ದಾರೆ.

ಗೋವ ವಿಧಾನಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ವಿಪರ್ಯಾಸವೆಂದರೆ ಗೋವದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ ಕರ್ನಾಟಕದಲ್ಲಿ ಬಿಜೆಪಿಯ ಕಡುರಾಜಕೀಯ ವೈರಿ ಕಾಂಗ್ರೆಸ್ ಅಧಿಕಾರದಲ್ಲಿದೆ.

ಅಗತ್ಯಬಿದ್ದರೆ ನೆರೆಯ ರಾಜ್ಯಗಳಿಂದ ಗೋಮಾಂಸ ಪಡೆಯಲಾಗುವುದು. ಹೀಗೆ ಪಡೆಯಲಾಗುವ ಮಾಂಸವನ್ನು ಅಧಿಕೃತ ವೈದ್ಯರಿಂದ ತಪಾಸಣೆ ನಡೆಸಿದ ಬಳಿಕ ಗ್ರಾಹಕರಿಗೆ ಒದಗಿಸಲಾಗುವುದು ಎಂದು ಪಾರಿಕ್ಕರ್ ಹೇಳಿದರು.

 ರಾಜ್ಯದಲ್ಲಿರುವ ಏಕೈಕ ಅಧಿಕೃತ ಕಸಾಯಿಖಾನೆ , ಪೋಂಡದಲ್ಲಿರುವ ‘ಗೋವ ಮೀಟ್ ಕಾಂಪ್ಲೆಕ್ಸ್’ನಲ್ಲಿ ಪ್ರತಿದಿನ ಸುಮಾರು 2,000 ಕಿ.ಗ್ರಾಂ.ನಷ್ಟು ಗೋಮಾಂಸ ಲಭ್ಯವಾಗುತ್ತಿದೆ. ಉಳಿದ ಬೇಡಿಕೆಯನ್ನು ಕರ್ನಾಟಕದಿಂದ ಪಡೆದು ಪೂರೈಸಲಾಗುವುದು. ಅಲ್ಲದೆ ನೆರೆಯ ರಾಜ್ಯದಿಂದ ಗೋವದ ಅಧಿಕೃತ ಕಸಾಯಿಖಾನೆಗೆ ಜಾನುವಾರುಗಳನ್ನು ವಧೆ ನಡೆಸಲು ತರುವುದನ್ನು ನಿಷೇಧಿಸುವ ಯಾವುದೇ ಉದ್ದೇಶ ಸರಕಾರಕ್ಕಿಲ್ಲ ಎಂದವರು ತಿಳಿಸಿದರು. ಪ್ರಮುಖ ಪ್ರವಾಸೀ ಕೇಂದ್ರವಾಗಿರುವ ಗೋವದ ಜನಸಂಖ್ಯೆಯಲ್ಲಿ ಶೇ.30ರಷ್ಟು ಅಲ್ಪಸಂಖ್ಯಾತರಿದ್ದು ಇಲ್ಲಿ ಗೋಮಾಂಸ ಪ್ರಮುಖ ಆಹಾರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News