×
Ad

ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನತೆ: ನೇರ ಮಾತುಕತೆಗೆ ಅಮೆರಿಕ ಸಲಹೆ

Update: 2017-07-19 18:55 IST

ವಾಶಿಂಗ್ಟನ್, ಜು. 19: ಭಾರತ ಮತ್ತು ಚೀನಾಗಳ ನಡುವೆ ಸಿಕ್ಕಿಂ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನತೆಯನ್ನು ನಿವಾರಿಸಲು ನೇರ ಮಾತುಕತೆಯಲ್ಲಿ ತೊಡಗುವಂತೆ ಆ ದೇಶಗಳನ್ನು ಉತ್ತೇಜಿಸುವುದಾಗಿ ಅಮೆರಿಕ ಮಂಗಳವಾರ ಹೇಳಿದೆ.

ಭಾರತ ಮತ್ತು ಚೀನಾಗಳ ನಡುವೆ ಸಿಕ್ಕಿಂ ಗಡಿಯಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಕುರಿತು ಪಿಟಿಐ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು, ಹೆಚ್ಚೇನನ್ನೂ ಹೇಳಲಿಲ್ಲ.

‘‘ಹೆಚ್ಚಿನ ಮಾಹಿತಿಗಾಗಿ ನಾವು ನಿಮ್ಮನ್ನು ಭಾರತ ಮತ್ತು ಚೀನಾ ಸರಕಾರಗಳ ಬಳಿಗೆ ಕಳುಹಿಸುತ್ತೇವೆ’’ ಎಂದು ಅಧಿಕಾರಿ ನುಡಿದರು.

ವಿವಾದಿತ ಪ್ರದೇಶವನ್ನು ಭಾರತ ಡೋಕಾ ಲಾ ಎಂದು ಕರೆಯುತ್ತದೆ. ಭೂತಾನ್ ಇದನ್ನು ಡೋಕ್ಲಮ್ ಎಂದು ಕರೆದರೆ, ಇದು ತನ್ನ ಡೋಂಗ್ಲಾಂಗ್ ವಲಯದ ಭಾಗ ಎಂಬುದಾಗಿ ಚೀನಾ ಹೇಳಿಕೊಳ್ಳುತ್ತಿದೆ.

ಭಾರತ ಮತ್ತು ಚೀನಾಗಳು ಜಮ್ಮು ಮತ್ತು ಕಾಶ್ಮೀರದಿಂದ ಅರುಣಾಚಲಪ್ರದೇಶದವರೆಗೆ 3,488 ಕಿ.ಮೀ. ಉದ್ದದ ಗಡಿಯನ್ನು ಹಂಚಿಕೊಂಡಿವೆ. ಈ ಪೈಕಿ 220 ಕಿ.ಮೀ. ಭಾಗ ಸಿಕ್ಕಿಂನಲ್ಲಿದೆ.

ಚೀನಾ ಸೇನೆಯ ಹೆಚ್ಚುತ್ತಿರುವ ಉಪಸ್ಥಿತಿಗೆ ಅಮೆರಿಕ ಕಳವಳ

ತನ್ನ ಪ್ರಾದೇಶಿಕ ರಾಜಕೀಯ ಗುರಿಗಳನ್ನು ಸಾಧಿಸುವುದಕ್ಕಾಗಿ ಚೀನಾ ತನ್ನ ಆರ್ಥಿಕ ಶಕ್ತಿಯನ್ನು ಬಳಸಿಕೊಳ್ಳುತ್ತಿದೆ ಎಂದು ಅಮೆರಿಕದ ಉನ್ನತ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ. ಆಯಕಟ್ಟಿನ ಏಶ್ಯ-ಪೆಸಿಫಿಕ್ ವಲಯದಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಸೇನೆ (ಪಿಎಲ್‌ಎ)ಯ ಹೆಚ್ಚುತ್ತಿರುವ ಉಪಸ್ಥಿತಿಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಚೀನಾ ಸೇನೆಯ ಆಧುನೀಕರಣಗೊಂಡಿದ್ದು ಅದರ ಸಾಮರ್ಥ್ಯದಲ್ಲಿ ಹೆಚ್ಚಳವಾಗಿದೆ ಹಾಗೂ ಅಮೆರಿಕ ಸೇನಾ ತಂತ್ರಜ್ಞಾನವನ್ನೂ ಮೀರಿಸುವ ಸೂಚನೆಗಳನ್ನು ಅದು ನೀಡಿದೆ ಎಂದು ಅಮೆರಿಕದ ವಾಯುಪಡೆಯ ಜನರಲ್ ಪೌಲ್ ಸೆಲ್ವ ಮಂಗಳವಾರ ಹೇಳಿದ್ದಾರೆ.

‘‘ಚೀನಾದ ಸೇನಾ ಆಧುನೀಕರಣ ಮುಂದುವರಿದಿದ್ದು, ಚೀನಾದ ಸಾಮರ್ಥ್ಯವು ಅಮೆರಿಕ ಮತ್ತು ಅದರ ಮಿತ್ರ ದೇಶಗಳಿಗೆ ನಿರಂತರ ಸವಾಲಾಗಿದೆ’’ ಎಂದು ಅಮೆರಿಕದ ಎರಡನೆ ಸ್ಥಾನದ ಸೇನಾ ಅಧಿಕಾರಿ ಸೆಲ್ವ ಅಭಿಪ್ರಾಯಪಟ್ಟಿದ್ದಾರೆ.

ಸೆನೆಟ್ ಸಶಸ್ತ್ರ ಸೇವೆಗಳ ಸಮಿತಿಯ ಪ್ರಶ್ನೆಗಳಿಗೆ ನೀಡಿದ ಲಿಖಿತ ಉತ್ತರದಲ್ಲಿ ಅವರು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News