ಹಿಂದೂ ವಿಧವೆಯರ ಗೋಳು ಕೇಳುವವರಿಲ್ಲ: ಹೈಕೋರ್ಟ್ ಕಳವಳ

Update: 2017-07-19 16:52 GMT

ಬೆಂಗಳೂರು, ಜು.19: ಹಿಂದೂ ವಿಧವೆಯರ ಬದುಕು ಘೋರವಾಗಿದೆ. ಇದಕ್ಕೆಲ್ಲಾ ರಾಜಕಾರಣ ಮತ್ತು ಅಧಿಕಾರಶಾಹಿ ವ್ಯವಸ್ಥೆಯೇ ಕಾರಣವಾಗಿದೆ ಎಂದು ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಇಂಡಿಯನ್ ಓವರ್ಸೀಸ್ ಬ್ಯಾಂಕ್‌ನಲ್ಲಿ ಅನುಕಂಪ ಆಧಾರಿತ ಹುದ್ದೆ ನೀಡಲು ನಿರ್ದೇಶಿಸಬೇಕು ಎಂದು ಕೋರಿದ್ದ ಪ್ರಕರಣದಲ್ಲಿ ನ್ಯಾಯಮೂರ್ತಿ ಆರ್.ಎಸ್.ಚೌಹಾಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಬೇಸರ ವ್ಯಕ್ತಪಡಿಸಿದೆ.

ಯುರೋಪ್ ರಾಷ್ಟ್ರಗಳಲ್ಲಿ ಕ್ರೈಸ್ತ ಮಿಷನರಿಗಳು ಮತ್ತು ಧಾರ್ಮಿಕ ಸಂಘಟನೆಗಳು ವಿಧವೆಯರ ಕುರಿತು ಸಾಕಷ್ಟು ಕಾಳಜಿ ವಹಿಸುತ್ತವೆ. ಆದರೆ, ಹಿಂದೂ ಸಮಾಜದಲ್ಲಿ ಮಾತ್ರ ಇವರ ಗೋಳು ಕೇಳುವವರು ಇಲ್ಲದಂತಾಗಿದೆ ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ಆತಂಕ ವ್ಯಕ್ತಪಡಿಸಿದರು. ಉತ್ತರ ಭಾರತದ ವಾರಾಣಸಿಯಲ್ಲಿ ವಿಧವೆಯರಿಗೆ ಪುನರ್ವಸತಿ ಕಲ್ಪಿಸುವ ವ್ಯವಸ್ಥೆ ಇದೆ. ಆದರೆ, ದಕ್ಷಿಣ ಭಾರತದಲ್ಲಿ ಇಂತಹ ಯಾವುದೇ ಅನುಕೂಲ ಇಲ್ಲ ಎಂದು ಚೌಹಾಣ್ ಹೇಳಿದರು.

ಅರ್ಜಿದಾರರಾದ ಬಿ.ಆರ್.ಪುಷ್ಪಾ ಮೈಸೂರಿನ ಹೆಬ್ಬಾಳದ ನಿವಾಸಿ. ಅವರ ಪತಿ ಓವರ್ಸೀಸ್ ಬ್ಯಾಂಕಿನಲ್ಲಿ ನೌಕರಿ ಮಾಡುತ್ತಿದ್ದರು. ಸೇವೆಯಲ್ಲಿರುವಾಗಲೇ 2004ರಲ್ಲಿ ಅವರು ಸಾವಿಗೀಡಾಗಿದ್ದರು. ಪತಿಯ ಸಾವಿನ ನಂತರ ನನಗೆ ಜೀವನಾಧಾರ ಇಲ್ಲವಾಗಿದೆ. ಹೀಗಾಗಿ, ಅನುಕಂಪದ ಆಧಾರದಲ್ಲಿ ನೌಕರಿ ನೀಡಬೇಕು ಎಂದು ಪುಷ್ಪಾ ಅವರು ಬ್ಯಾಂಕಿಗೆ ಮನವಿ ಮಾಡಿದ್ದರು. ಆದರೆ ಈ ಮನವಿಯನ್ನು ಬ್ಯಾಂಕ್ ತಿರಸ್ಕರಿಸಿತ್ತು. ಇದನ್ನು ಪುಷ್ಪಾ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಇದೇ 21ರಂದು ಬ್ಯಾಂಕ್‌ನ ಅಧಿಕಾರಿಗಳು ಕೋರ್ಟ್‌ಗೆ ಹಾಜರಾಗಿ ವಿವರಣೆ ಸಲ್ಲಿಸುವಂತೆ ನ್ಯಾಯಪೀಠ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News