ಶಾಲಾ ಮಕ್ಕಳ ಬ್ಯಾಗ್ ಭಾರ ಇಳಿಸಲು ತೆಲಂಗಾಣ ಸರಕಾರ ನಿರ್ಧಾರ
ಹೈದರಾಬಾದ್, ಜು. 20: ವಿದ್ಯಾರ್ಥಿಗಳಲ್ಲಿ ಉದ್ವೇಗದ ಅಸ್ವಸ್ಥತೆ, ದೈಹಿಕ ದುಷ್ಪರಿಣಾಮ ತಡೆಯಲು ಶಾಲಾ ಮಕ್ಕಳ ಬ್ಯಾಗ್ ಬಾರ ಕಡಿತಗೊಳಿಸಲು ತೆಲಂಗಾಣ ಸರಕಾರ ನಿರ್ಧರಿಸಿದೆ.
ಪ್ರಾಥಮಿಕ ತರಗತಿಯಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳ ಶಾಲೆ ಬ್ಯಾಗ್‌ನ ತೂಕದ ಮಿತಿ ಪರಿಷ್ಕರಿಸಿ ಸರಕಾರ ನಿನ್ನೆ ಆದೇಶ ನೀಡಿದೆ.
ಪಠ್ಯಪುಸ್ತಕ, ನೋಟ್ಸ್ ಪುಸ್ತಕ ಸೇರಿ ಶಾಲೆ ಬ್ಯಾಗ್‌ನ ತೂಕ 1 ಹಾಗೂ 2ನೇ ತರಗತಿವರೆಗೆ 5 ಕಿ.ಗ್ರಾಂ. ಮೀರಬಾರದು. 3ರಿಂದ 5ನೇ ತರಗತಿ ವರೆಗೆ 2ರಿಂದ 3ಕಿ.ಗ್ರಾಂ. ಮೀರಬಾರದು ಎಂದು ಸರಕಾರದ ನೂತನ ಆದೇಶ ಹೇಳಿದೆ. 6 ಹಾಗೂ 7ನೇ ತರಗತಿಗೆ 4 ಕಿ.ಗ್ರಾಂ. ಮೀರಬಾರದು. 7ರಿಂದ 9ನೇ ತರಗತಿ ವರೆಗೆ 4.50 ಕಿ.ಗ್ರಾಂ. ಮೀರಬಾರದು. 10ನೇ ತರಗತಿಗೆ 5 ಕಿ.ಗ್ರಾಂ ಮೀರಬಾರದು ಎಂದು ಆದೇಶ ಹೇಳಿದೆ.
ಕೆಲವು ಜಿಲ್ಲೆಗಳ ಅಂದಾಜಿನ ಪ್ರಕಾರ ಶಾಲೆ ಬ್ಯಾಗ್ ಪ್ರಾಥಮಿಕ ತರಗತಿ ವಿದ್ಯಾರ್ಥಿಗಳ 6ರಿಂದ 12 ಕಿ.ಗ್ರಾ.ವರೆಗೆ ಇರುತ್ತದೆ. ಪ್ರೌಢಶಾಲೆ ಮಟ್ಟದಲ್ಲಿ 17 ಕಿ.ಗ್ರಾಂ. ಇರುತ್ತದೆ ಎಂದು ಆದೇಶ ತಿಳಿಸಿದೆ.
ಇದು ಬೆಳೆಯುವ ಮಕ್ಕಳ ಮೇಲೆ ಗಂಭೀರ ದೈಹಿಕ ದುಷ್ಪರಿಣಾಮ ಉಂಟು ಮಾಡುತ್ತದೆ ಹಾಗೂ ಬೆನ್ನುಮೂಳೆ, ಮೊಣಕಾಲಿಗೆ ಹಾನಿ ಉಂಟು ಮಾಡುತ್ತದೆ. ವಿದ್ಯಾರ್ಥಿಗಳಲ್ಲಿ ಉದ್ವೇಗ ಕೂಡ ಉಂಟು ಮಾಡುತ್ತದೆ ಎಂದು ಅವರು ಹೇಳಿದ್ದಾರೆ.