×
Ad

ಮೋದಿಯ ಚೀನಾ ನೀತಿಯನ್ನು ಅಪಹರಿಸಿದ ಹಿಂದೂ ರಾಷ್ಟ್ರೀಯತೆ

Update: 2017-07-20 18:55 IST

ಬೀಜಿಂಗ್, ಜು. 20: ಹೆಚ್ಚುತ್ತಿರುವ ಹಿಂದೂ ರಾಷ್ಟ್ರೀಯತೆಯು ಪ್ರಧಾನಿ ನರೇಂದ್ರ ಮೋದಿಯ ಚೀನಾ ನೀತಿಯನ್ನು ಅಪಹರಿಸಿದೆ ಹಾಗೂ ಇದು ಎರಡು ದೇಶಗಳ ನಡುವೆ ಯುದ್ಧಕ್ಕೆ ಕಾರಣವಾಗಬಹುದು ಎಂದು ಚೀನಾದ ಸರಕಾರ ಪರ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ಗುರುವಾರ ಹೇಳಿದೆ ಹಾಗೂ ಇದು ಭಾರತದ ಸ್ವಂತ ಹಿತಾಸಕ್ತಿಗಳನ್ನು ‘ಅಪಾಯ’ಕ್ಕೆ ಗುರಿಪಡಿಸಬಹುದಾಗಿದೆ ಎಂದು ಎಚ್ಚರಿಸಿದೆ.

ಭಾರತ ಮತ್ತು ಚೀನಾಗಳ ನಡುವಿನ ಸಿಕ್ಕಿಂ ಗಡಿಯಲ್ಲಿ ಉಭಯ ಸೇನೆಗಳ ನಡುವೆ ಏರ್ಪಟ್ಟಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಭಾರತದ ವಿರುದ್ಧ ಇನ್ನೊಂದು ವಾಗ್ದಾಳಿ ನಡೆಸಿರುವ ಪತ್ರಿಕೆಯು, ‘ರಾಷ್ಟ್ರೀಯ ಸಾಮರ್ಥ್ಯ’ದಲ್ಲಿ ಭಾರತ ಚೀನಾಕ್ಕಿಂತ ದುರ್ಬಲ ಎಂದು ಹೇಳಿದೆ. ಆದರೆ, ಈ ವಾಸ್ತವವನ್ನು ಅರ್ಥಮಾಡಿಕೊಳ್ಳುವಲ್ಲಿ ಭಾರತೀಯ ರಾಜಕಾರಣಿಗಳು ವಿಫಲರಾಗಿದ್ದಾರೆ ಎಂದಿದೆ.

ಈ ಸರಕಾರ 2014ರಲ್ಲಿ ಅಧಿಕಾರಕ್ಕೆ ಬಂದಂದಿನಿಂದ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ಹಿಂದೂ ರಾಷ್ಟ್ರೀಯವಾದಿ ಹಿಂಸೆಯನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಪತ್ರಿಕೆಯು ಮೋದಿ ಸರಕಾರಕ್ಕೆ ನೆನಪಿಸಿದೆ.

ಹಾಲಿ ಭಾರತ-ಚೀನಾ ಗಡಿ ಬಿಕ್ಕಟ್ಟು ಪೂರ್ವಯೋಜಿತವಾಗಿದೆ ಹಾಗೂ ಹಿಂದೂ ರಾಷ್ಟ್ರೀಯವಾದಿ ಭಾವನೆಗಳನ್ನು ತೃಪ್ತಿಪಡಿಸಲು ಅದನ್ನು ಜಾರಿಗೊಳಿಸಲಾಗಿದೆ ಎಂದು ಪತ್ರಿಕೆ ಆರೋಪಿಸಿದೆ.

 ಹೆಚ್ಚುತ್ತಿರುವ ಧಾರ್ಮಿಕ ರಾಷ್ಟ್ರೀಯತೆಯ ಅಲೆಯನ್ನೇರಿ ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದರು ಹಾಗೂ ಈಗ ಅವರು ಚೀನಾ ಮತ್ತು ಪಾಕಿಸ್ತಾನಗಳ ವಿರುದ್ಧ ತನ್ನ ‘ಪ್ರಬಲ’ ನೀತಿಗಳ ಮೂಲಕ ಹಿಂದೂ ರಾಷ್ಟ್ರೀಯ ಭಾವನೆಗಳನ್ನು ತೃಪ್ತಿಪಡಿಸಲು ಯತ್ನಿಸುತ್ತಿದ್ದಾರೆ ಎಂದು ‘ಗ್ಲೋಬಲ್ ಟೈಮ್ಸ್’ ಹೇಳಿದೆ.

ಮುಸ್ಲಿಮರ ಮೇಲೆ ದಾಳಿ ಧಾರ್ಮಿಕ ರಾಷ್ಟ್ರೀಯತೆಯ ಭಾಗ

ಮುಸ್ಲಿಮರ ಮೇಲೆ ದಾಳಿ ನಡೆಸುವುದು ಹೆಚ್ಚುತ್ತಿರುವ ಧಾರ್ಮಿಕ ರಾಷ್ಟ್ರೀಯತೆಯ ಭಾಗವಾಗಿದೆ ಎಂದು ಪತ್ರಿಕೆ ಹೇಳಿದೆ.

‘‘ಧಾರ್ಮಿಕ ರಾಷ್ಟ್ರೀಯತೆ ವಿಕೋಪಕ್ಕೆ ಹೋದರೆ ಮೋದಿ ಸರಕಾರ ಏನೂ ಮಾಡಲಾರದು. ಅವರು 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದಾಳಿಗಳನ್ನು ಹತ್ತಿಕ್ಕುವಲ್ಲಿನ ಅವರ ವೈಫಲ್ಯವೇ ಇದನ್ನು ಹೇಳುತ್ತದೆ’’ ಎಂಬುದಾಗಿ ಯು ನಿಂಗ್ ಎಂಬವರು ಬರೆದ ‘ಜಿಟಿ ಕಾಮೆಂಟರಿ’ ಎಂಬ ಲೇಖನ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News