ಇನ್ನೆರಡು ವರ್ಷಗಳಲ್ಲಿ ಭಾರತಕ್ಕೆ ರಶ್ಯದಿಂದ ಕಮೊವ್ ಹೆಲಿಕಾಪ್ಟರ್‌ಗಳು

Update: 2017-07-20 14:08 GMT

ಮಾಸ್ಕೊ, ಜು. 20: ಗುತ್ತಿಗೆಗೆ ಸಹಿ ಹಾಕಿದ ಎರಡು ವರ್ಷಗಳಲ್ಲಿ ಭಾರತಕ್ಕೆ ಕಮೊವ್ ಸೇನಾ ಹೆಲಿಕಾಪ್ಟರ್‌ಗಳ ಪೂರೈಕೆಯನ್ನು ಆರಂಭಿಸಲಾಗುವುದು ಎಂದು ರಶ್ಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

 ಅದೇ ವೇಳೆ, ಭಾರತಕ್ಕೆ ಪೂರೈಸಲಾಗುವ ಹೆಲಿಕಾಪ್ಟರ್‌ಗಳ ಸಂಖ್ಯೆಯನ್ನು ಭವಿಷ್ಯದಲ್ಲಿ 200ಕ್ಕಿಂತಲೂ ಹೆಚ್ಚಿನ ಸಂಖ್ಯೆಗೆ ವಿಸ್ತರಿಸಬಹುದಾಗಿದೆ ಎಂದು ರಾಸ್ಟೆಕ್ ಸ್ಟೇಟ್ ಕಾರ್ಪೊರೇಶನ್‌ನ ಸಿಇಒ ಸರ್ಗಿ ಚೆಮೆರೊವ್ ಹೇಳಿದರು.

ಕಮೊವ್ ಸೇನಾ ಹೆಲಿಕಾಪ್ಟರ್‌ಗಳ ಉತ್ಪಾದನೆಗಾಗಿ ಮೇ ತಿಂಗಳಲ್ಲಿ ಜಂಟಿ ಉದ್ಯಮ ಸ್ಥಾಪಿಸಿದ ಬಳಿಕ, ಹೆಲಿಕಾಪ್ಟರ್‌ಗಳ ಪೂರೈಕೆಗಾಗಿ ಭಾರತದ ರಕ್ಷಣಾ ಸಚಿವಾಲಯದಿಂದ ರಶ್ಯ ಅಧಿಕೃತ ಮನವಿಯೊಂದನ್ನು ಎದುರು ನೋಡುತ್ತಿದೆ.

ಆಗ ಹೆಲಿಕಾಪ್ಟರ್‌ಗಳ ಪೂರೈಕೆಗಾಗಿ ಗುತ್ತಿಗೆಯೊಂದನ್ನು ಸಿದ್ಧಪಡಿಸಲಾಗುವುದು.

‘‘ಗುತ್ತಿಗೆಗೆ ಸಹಿ ಹಾಕಿದ ಬಳಿಕ ಎರಡು ವರ್ಷಗಳಲ್ಲಿ ಮೊದಲ ಹೆಲಿಕಾಪ್ಟರ್‌ಗಳನ್ನು ಪೂರೈಸಲಾಗುವುದು. ಆ ಕುರಿತ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಹಾಗೂ ಅದನ್ನು ಜಾರಿಗೊಳಿಸಲಾಗುತ್ತಿದೆ’’ ಎಂದು ರಶ್ಯದ ಮಹತ್ವದ ವೈಮಾನಿಕ ಪ್ರದರ್ಶನ ‘ಮ್ಯಾಕ್ಸ್ 2017’ರ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಿಳಿಸಿದರು.

ಕೆಎ-226ಟಿ ಹೆಲಿಕಾಪ್ಟರ್‌ಗಳ ಪೂರೈಕೆಗಾಗಿ ಭಾರತ ಮತ್ತು ರಶ್ಯ 2015ರಲ್ಲಿ 1 ಬಿಲಿಯ ಡಾಲರ್ (ಸುಮಾರು 6,450 ಕೋಟಿ ರೂಪಾಯಿ) ಒಪ್ಪಂದಕ್ಕೆ ಸಹಿ ಹಾಕಿವೆ.

‘‘ನಾವು ಒಟ್ಟು 200 ಹೆಲಿಕಾಪ್ಟರ್‌ಗಳನ್ನು ಪೂರೈಸಬೇಕಾಗಿದೆ. ಆದರೆ, ಭವಿಷ್ಯದಲ್ಲಿ ಈ ಸಂಖ್ಯೆ ಹೆಚ್ಚಬಹುದಾಗಿದೆ’’ ಎಂದು ಚೆಮೆರೊವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News