ಉಗ್ರ ಗುಂಪುಗಳ ವಿರುದ್ಧ ಕ್ರಮಕ್ಕೆ ಪಾಕ್ ವಿಫಲ: ಅಮೆರಿಕ

Update: 2017-07-20 14:40 GMT

ವಾಶಿಂಗ್ಟನ್, ಜು. 20: ತನ್ನ ನೆಲದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಗುಂಪುಗಳು ಮತ್ತು ವ್ಯಕ್ತಿಗಳ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಪಾಕಿಸ್ತಾನ ವಿಫಲವಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ನಡೆಸಿದ ಭಯೋತ್ಪಾದನೆ ಮತ್ತು ಇತರ ಬೆದರಿಕೆಗಳ ಸಮೀಕ್ಷೆಯೊಂದು ತಿಳಿಸಿದೆ.

ಭಯೋತ್ಪಾದನೆ ಕುರಿತ ವಿದೇಶಾಂಗ ಇಲಾಖೆಯ 2016ರ ಕೌಂಟಿ ವರದಿಗಳು, ಲಷ್ಕರೆ ತಯ್ಯಬ, ಜೈಶೆ ಮುಹಮ್ಮದ್ ಮತ್ತು ಹಕ್ಕಾನಿ ನೆಟ್‌ವರ್ಕ್‌ಗಳು ಪಾಕಿಸ್ತಾನದ ಅಡಗುದಾಣಗಳಿಂದ ಕಾರ್ಯಾಚರಿಸುತ್ತಿವೆ ಎಂದು ಹೇಳಿವೆ.

ಲಷ್ಕರೆ ತಯ್ಯಬ ಮತ್ತು ಜೈಶೆ ಮುಹಮ್ಮದ್ ಭಾರತದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದರೆ, ಹಕ್ಕಾನಿ ನೆಟ್‌ವರ್ಕ್ ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ನೇತೃತ್ವದ ಮಿತ್ರ ಪಡೆಗಳ ಮೇಲೆ ದಾಳಿ ನಡೆಸಿದೆ.

‘‘ಜೈಶೆ ತಯ್ಯಬ ಮತ್ತು ಜೈಶೆ ಮುಹಮ್ಮದ್ ಮುಂತಾದ ಹೊರಗಿನ ದೇಶಗಳ ಮೇಲೆ ದಾಳಿ ನಡೆಸುವ ಸಂಘಟನೆಗಳ ವಿರುದ್ಧ ಪಾಕಿಸ್ತಾನ 2016ರಲ್ಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಸಂಘಟನೆಗಳು ಈಗಲೂ ಪಾಕಿಸ್ತಾನದಲ್ಲಿ ಹಣ ಸಂಗ್ರಹ ಮಾಡುತ್ತಿವೆ, ಸದಸ್ಯರನ್ನು ಸಂಘಟಿಸುತ್ತಿವೆ ಹಾಗೂ ತರಬೇತಿ ನೀಡುತ್ತಿವೆ’’ ಎಂದು ವರದಿ ಬೆಟ್ಟು ಮಾಡಿದೆ.

‘‘ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್ ಮುಂತಾದ ಪಾಕಿಸ್ತಾನಿ ನೆಲದಲ್ಲೇ ದಾಳಿಗಳನ್ನು ನಡೆಸುವ ಗುಂಪುಗಳ ವಿರುದ್ಧ ಪಾಕಿಸ್ತಾನದ ಸೇನಾ ಮತ್ತು ಭದ್ರತಾ ಪಡೆಗಳು ದಮನ ಕಾರ್ಯಾಚರಣೆ ನಡೆಸಿವೆ. ಆದರೆ, ಅವುಗಳು ಅಫ್ಘಾನ್ ತಾಲಿಬಾನ್ ಅಥವಾ ಹಕ್ಕಾನಿ ನೆಟ್‌ವರ್ಕ್‌ಗಳ ವಿರುದ್ಧ ಗಂಭೀರ ಕ್ರಮ ತೆಗೆದುಕೊಂಡಿಲ್ಲ ಅಥವಾ ಅಫ್ಘಾನಿಸ್ತಾನದಲ್ಲಿ ಅಮೆರಿಕ ಹಿತಾಸಕ್ತಿಗಳಿಗೆ ಬೆದರಿಕೆ ಹಾಕುವ ಗುಂಪುಗಳ ಸಾಮರ್ಥ್ಯವನ್ನು ಗಣನೀಯವಾಗಿ ಕುಂಠಿತಗೊಳಿಸಿಲ್ಲ’’ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News