ಡೋಕಾ ಲಾ ಬಿಕ್ಕಟ್ಟು: ಶಾಂತಿಯುತ ಇತ್ಯರ್ಥಕ್ಕೆ ಭಾರತ ಒಲವು

Update: 2017-07-20 15:33 GMT

ಹೊಸದಿಲ್ಲಿ,ಜು.20: ರಾಜತಾಂತ್ರಿಕ ಮಾರ್ಗಗಳ ಮೂಲಕ ಡೋಕಾ ಲಾ ಬಿಕ್ಕಟ್ಟಿನ ಶಾಂತಿಯುತ ಇತ್ಯರ್ಥಕ್ಕೆ ಗುರುವಾರ ಮತ್ತೊಮ್ಮೆ ಪ್ರತಿಪಾದಿಸಿರುವ ಭಾರತವು, ಭಿನ್ನಾಭಿಪ್ರಾಯಗಳು ವಿವಾದಗಳಾಗಕೂಡದು ಎಂದು ಒತ್ತಿ ಹೇಳಿದೆ.

ಇಲ್ಲಿ ಸುದ್ದಿಗಾರರೊಡನೆ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಗೋಪಾಲ ಬಾಗ್ಲೆ ಅವರು, ಡೋಕಾ ಲಾ ಪ್ರದೇಶದಲ್ಲಿಯ ಬೆಳವಣಿಗೆಗಳ ಕುರಿತು ಭಾರತ ಸರಕಾರವು ಭೂತಾನ ಸರಕಾರದೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ತಿಳಿಸಿದರು.

  ಚೀನಾದೊಂದಿಗಿನ ಗಡಿ ವಿವಾದಗಳಿಗೆ ಶಾಂತಿಯುತ ಪರಿಹಾರಗಳನ್ನು ಕಂಡುಕೊಳ್ಳು ವುದು ಭಾರತದ ನಿಲುವಾಗಿದೆ ಎಂದ ಅವರು, ಭಾರತ ಮತ್ತು ಚೀನಾ ನಡುವಿನ ಭಿನ್ನಾಭಿಪ್ರಾಯಗಳು ವಿವಾದಗಳಾಗಲು ಅವಕಾಶ ನೀಡಬಾರದೆಂದು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ಒತ್ತಿ ಹೇಳಿದರು.

ಕಳೆದ ಜೂನ್‌ನಲ್ಲಿ ಕಝಖ್ ರಾಜಧಾನಿ ಅಸ್ತಾನಾದಲ್ಲಿ ನಡೆದಿದ್ದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಚೀನಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಿದ್ದರು.

ವಿವಾದಗಳು ಶಾಂತಿಪೂರ್ಣವಾಗಿ ಬಗೆಹರಿಯಬೇಕು ಎನ್ನುವುದು ಜಗತ್ತಿನಲ್ಲಿಯ ಪ್ರತಿಯೊಂದು ಜವಾಬ್ದಾರಿಯುತ ಸರಕಾರ ಮತ್ತು ವ್ಯಕ್ತಿಗಳ ಆದ್ಯತೆಯಾಗಿದೆ ಎಂದು ಬಾಗ್ಲೆ ಹೇಳಿದರು.

ಡೋಕಾ ಲಾ ಬಿಕ್ಕಟ್ಟಿನ ಕುರಿತು ಭಾರತವು ಇತರ ದೇಶಗಳಿಗೆ ಮಾಹಿತಿ ನೀಡಿದೆಯೇ ಎಂಬ ಪ್ರಶ್ನೆಗೆ ಅವರು, ಸೂಕ್ಷ್ಮವಿಷಯಗಳ ಕುರಿತು ರಾಜತಾಂತ್ರಿಕ ಸಂವಾದಗಳಿಗೆ ಸಂಬಂಧಿಸಿದಂತೆ ತಾನು ಹೇಳಿಕೆ ನೀಡುವುದು ಸೂಕ್ತವಲ್ಲ ಎಂದು ಉತ್ತರಿಸಿದರು.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್ ಅವರು ಬ್ರಿಕ್ಸ್ ಸಭೆಯಲ್ಲಿ ಭಾಗವಹಿಸಲು ಜು.27ರಂದು ಬೀಜಿಂಗ್‌ಗೆ ತೆರಳಲಿದ್ದಾರೆ ಎಂದು ಬಾಗ್ಲೆ ದೃಢಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News