ಹರ್ಮನ್ ಪ್ರೀತ್ ಕೌರ್ ಔಟಾಗದೆ 171 ರನ್: ಭಾರತ 281/4

Update: 2017-07-20 17:53 GMT

ಲಂಡನ್, ಜು.20: ಮಧ್ಯಮ ಸರದಿಯ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್ ಔಟಾಗದೆ ದಾಖಲಿಸಿದ ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯ ವಿರುದ್ಧದ ಸೆಮಿಫೈನಲ್‌ನಲ್ಲಿ ಭಾರತ ನಿಗದಿತ 42 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 281ರನ್ ಗಳಿಸಿದೆ.

 ಹರ್ಮನ್ ಪ್ರೀತ್ ಕೌರ್ ಔಟಾಗದೆ 171 ರನ್(115ಎ, 20ಬೌ, 7ಸಿ) ಕಾಣಿಕೆ ನೀಡುವ ಮೂಲಕ ಆಸ್ಟ್ರೇಲಿಯಕ್ಕೆ ಕಠಿಣ ಸವಾಲು ನೀಡಲು ನೆರವಾದರು.

 ಮಳೆ ಬಾಧಿತ ಪಂದ್ಯದಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಭಾರತದ ಮಹಿಳಾ ತಂಡದ ಆಟಗಾರ್ತಿಯರು ಆರಂಭದಲ್ಲಿ ಆಸ್ಟ್ರೇಲಿಯದ ಬೌಲರ್‌ಗಳ ದಾಳಿಯನ್ನು ಎದುರಿಸಲಾರದೆ ಒದ್ದಾಡಿದರು. ಸ್ಮತಿ ಮಂಧಾನ 6ರನ್ ಮತ್ತು ಪೂನಮ್ ರಾವತ್ 14 ರನ್ ಗಳಿಸಿ ಪೆವಿಲಿಯನ್‌ಗೆ ವಾಪಸಾದಾಗ ನಾಯಕಿ ಮಿಥಾಲಿ ರಾಜ್ ಮತ್ತು ಹರ್ಮನ್‌ಪ್ರೀತ್ ಕೌರ್ ತಂಡವನ್ನು ಆಧರಿಸಿದರು.

ಮೂರನೆ ವಿಕೆಟ್‌ಗೆ ಜೊತೆಯಾಟದಲ್ಲಿ ಮಿಥಾಲಿ ರಾಜ್ ಮತ್ತು ಕೌರ್ 66 ರನ್ ಸೇರಿಸಿದರು. ಮಿಥಾಲಿ ರಾಜ್ 36 ರನ್(61ಎ, 2ಬೌ) ಗಳಿಸಿ ಔಟಾದರು.

 ನಾಲ್ಕನೆ ವಿಕೆಟ್‌ಗೆ ಕೌರ್‌ಗೆ ದೀಪ್ತಿ ಶರ್ಮ ಜೊತೆಯಾದರು. ಇವರ ಜೊತೆಯಾಟದಲ್ಲಿ ತಂಡದ ಖಾತೆಗೆ 137 ರನ್ ಜಮೆ ಆಗಿತ್ತು.

   77ನೆ ಏಕದಿನ ಪಂದ್ಯವನ್ನಾಡುತ್ತಿರುವ ಕೌರ್ 90 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಲ್ಲಿ 3ನೆ ಏಕದಿನ ಶತಕ ಪೂರ್ಣಗೊಳಿಸಿದರು. ನ್ಯೂಝಿಲೆಂಡ್ ವಿರುದ್ಧದ ಕಳೆದ ಪಂದ್ಯದಲ್ಲಿ ಅರ್ಧಶತಕ (60) ದಾಖಲಿಸಿದ್ದ ಭಾರತದ ತಂಡದ ಉಪನಾಯಕಿ ಕೌರ್ ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಶತಕ ದಾಖಲಿಸಿದರು.

ಆರಂಭದ ಎರಡು ವಿಕೆಟ್‌ಗಳನ್ನು ಬೇಗನೆ ಉಡಾಯಿಸಿದ್ದ ಹಾಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯದ ಬೌಲರ್‌ಗಳು ಕೌರ್ ಬ್ಯಾಟಿಂಗನ್ನು ನಿಯಂತ್ರಿಸಲು ಸಾಧ್ಯವಾಗದೆ ಕೈ ಸುಟ್ಟುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News