ಒಡೆದ ಪೈಪ್‌ಲೈನ್: ಚರಂಡಿ ಸೇರುತ್ತಿದೆ ವೆನ್ಲಾಕ್ ಆಸ್ಪತ್ರೆಯ ತ್ಯಾಜ್ಯಗಳು!

Update: 2017-07-20 18:37 GMT

ಮಂಗಳೂರು, ಜು.20: ದ.ಕ. ಜಿಲ್ಲೆಯ ವಿವಿಧ ತಾಲೂಕಿಗಳಿಂದ ಆಗಮಿಸುತ್ತಿರುವ ರೋಗಿಗಳ ವೈದ್ಯಕೀಯ ಚಿಕಿತ್ಸೆ ನೀಡುತ್ತಿರುವ ನಗರದ ಸರಕಾರಿ ಆಸ್ಪತ್ರೆಯಾಗಿರುವ ವೆನ್ಲಾಕ್ ಬಳಿ ಕಳೆದ ಕೆಲವು ದಿನಗಳಿಂದ ಪೈಪ್‌ಲೈನ್ ಒಡೆದು ಆಸ್ಪತ್ಯೆ ತ್ಯಾಜ್ಯಗಳು ಹೊರಬರುತ್ತಿದ್ದರೂ ಅದನ್ನು ದುರಸ್ತಿ ಮಾಡುವಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ನಿರ್ಲಕ್ಷ ತೋರಿದೆ ಎಂಬ ಆರೋಪ ಪಾಲಿಕೆಯ ವಿರುದ್ಧ ಕೇಳಿ ಬಂದಿದೆ.

ನಗರದ ಹಂಪನಕಟ್ಟೆ ಸಿಗ್ನಲ್‌ನಿಂದ ವೆನ್ಲಾಕ್ ಆಸ್ಪತ್ರೆಯ ಹಿಂಬದಿಯಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ಈ ರಸ್ತೆಯ ಬದಿ ತೆರೆದ ಚರಂಡಿ ಇದ್ದು, ಈ ಚರಂಡಿಯ ಒಳಗಿನಿಂದ ಆಸ್ಪತ್ರೆ ತಾಜ್ಯಗಳು ಹಾದುಹೋಗಲು ಪೈಪ್‌ಲೈನ್‌ನನ್ನು ಅಳವಡಿಸಲಾಗಿದೆ. ಆದರೆ, ಈ ಪೈಪ್‌ಲೈನ್ ಒಡೆದಿರುವುದರಿಂದ ಆಸ್ಪತ್ರೆಯ ತ್ಯಾಜ್ಯಗಳು ಚರಂಡಿಯನ್ನು ಸೇರುತ್ತಿವೆ.

ಇದರಿಂದಾಗಿ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುವ ಸೊಳ್ಳೆಗಳ ಉತ್ಪತ್ತಿಗೆ ಈ ಚರಂಡಿ ಎಡೆ ಮಾಡಿಕೊಡುತ್ತಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೂ ಇದು ಮಾರಕವಾಗಿ ಪರಿಣಮಿಸುತ್ತಿದ್ದು, ರೋಗ ಹರಡುವ ಭೀತಿಯನ್ನು ಮೂಡಿಸಿದೆ. ಆಸ್ಪತ್ರೆಯು ಹೊರಸೂಸುವ ತಾಜ್ಯಗಳಿಂದಾಗಿ ಆಸ್ಪತ್ರೆಯ ಸುತ್ತಮುತ್ತ ನೈಮರ್ಲದ್ಯ ಕೊರತೆ ಎದ್ದು ಕಾಣುತ್ತಿದೆ.

ಸಾರ್ವಜನಿಕರು ನಡೆದಾಡುವ ಈ ರಸ್ತೆಯಲ್ಲಿ ಮಳೆಗಾಲದಲ್ಲಿ ಚರಂಡಿಯಲ್ಲಿ ನೀರು ತುಂಬಿ ರಸ್ತೆಗೆ ಹರಿಯುತ್ತದೆ. ಆಸ್ಪತ್ರೆಗೆ ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವ ರೋಗಿಗಳ ಹಾಗೂ ನಡೆದಾಡುವ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಪೈಪ್‌ಲೈನ್‌ನ್ನು ಕೂಡಲೇ ದುರಸ್ತಿಗೊಳಿಸಬೇಕು, ಅಲ್ಲದೆ ತೆರೆದ ಚರಂಡಿಯನ್ನು ಮುಚ್ಚಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪಾಲಿಕೆ ಕ್ರಮ ಕೈಗೊಳ್ಳಲಿ: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳಪಡುವ ವೆನ್ಲಾಕ್ ಆಸ್ಪತ್ರೆಯ ಹತ್ತಿರದಲ್ಲೇ ಒಡೆದ ಪೈಪ್‌ಲೈನ್‌ನ್ನು ದುರಸ್ತಿಗೊಳಿಸುವುದು ಪಾಲಿಕೆಯ ಕರ್ತವ್ಯವಾಗಿದೆ. ಈ ಬಗ್ಗೆ ಮನಪಾ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅವರಿಗೆ ಪತ್ರ ಬರೆದಿದ್ದೇನೆ. ಕ್ರಮ ಕೈಗೊಳ್ಳುವ ಭರವಸೆ ಇದೆ

- ಡಾ.ರಾಜೇಶ್ವರಿದೇವಿ ಎಚ್.ಆರ್.ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರು

ಕ್ರಮ ಕೈಗೊಳ್ಳುತ್ತೇವೆ: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಶೀಘ್ರ ಕ್ರಮ ಕೈಗೊಳ್ಳುತ್ತೇವೆ. ಪಾಲಿಕೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸುವಂತೆ ಸೂಚಿಸಲಾಗುವುದು. ವೆನ್ಲಾಕ್ ಆಸ್ಪತ್ರೆಯ ಆಡಳಿತ ಮಂಡಳಿಯವರು ಕೂಡ ಈ ಬಗ್ಗೆ ನಿಗಾ ವಹಿಸಬೇಕು. ಸಾರ್ವಜನಿಕರ ಆರೋಗ್ಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.

- ವಿನಯ್‌ರಾಜ್ (ಮನಪಾ ಸದಸ್ಯ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News