‘ಕೆಂಪೇಗೌಡರ ಶ್ರಮದಿಂದ ಬೆಂಗಳೂರು ಇಂದು ಸಿಲಿಕಾನ್ ಸಿಟಿ’

Update: 2017-07-21 09:15 GMT

ಉಡುಪಿ, ಜು.21: ಕೆಂಪೇಗೌಡರ ಶ್ರಮ ಇಲ್ಲದಿದ್ದರೆ ಇಂದು ಬೆಂಗಳೂರು ನಗರ ಸಿಲಿಕಾನ್ ಸಿಟಿ ಆಗಿರದೆ, ಕೇವಲ ಹಳ್ಳಿಯಾಗಿಯೇ ಉಳಿದಿರುತ್ತಿತ್ತು. ಎಲ್ಲರಿಗೂ ಆಶ್ರಯ ನೀಡಿರುವ ಬೆಂಗಳೂರಿಗೆ ಭಾರತೀಯರೆಲ್ಲರೂ ಕೃತಜ್ಞರಾಗಿರಬೇಕು ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಅನುರಾಧಾ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆದಿಉಡುಪಿ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾದ ಕೆಂಪೇಗೌಡ ಜಯಂತಿ ಆಚರಣೆಯಲ್ಲಿ ಅವರು ಮಾತನಾಡುತ್ತಿದ್ದರು.

ಬೆಂದ ಕಾಳೂರು ಎಂಬ ಹಳ್ಳಿಯನ್ನು ಬೆಂಗಳೂರು ಎಂಬುದಾಗಿ ಪರಿವರ್ತಿಸಿ ಕರ್ನಾಟಕದ ರಾಜಧಾನಿಯನ್ನಾಗಿ ಮಾಡಿ ಜಗತ್ಪ್ರಸಿದ್ಧಗೊಳಿಸಿದ್ದು ಕೆಂಪೇಗೌಡರು. ಹಾಗಾಗಿ ಅವರನ್ನು ಇಂದಿಗೂ ನಾಡಪ್ರಭು ಎಂದು ಕರೆಯಲಾಗುತ್ತಿದೆ. ಕರ್ನಾಟಕದ ರಾಜಧಾನಿಗೆ ಬೆಂಗಳೂರನ್ನು ಆಯ್ಕೆ ಮಾಡಲು ಇಲ್ಲಿನ ಹವಾಮಾನ ಹಾಗೂ ಹಸಿರು ಪರಿಸರವೇ ಕಾರಣ. ಬೆಂಗಳೂರಿನಲ್ಲಿ ಯಾವುದೇ ಜಲ ಮೂಲ ಇಲ್ಲದಿದ್ದಾಗ ಸುತ್ತಮುತ್ತ ಸಾವಿರಾರು ಕೆರೆಗಳನ್ನು ನಿರ್ಮಿಸಿ ಜಲಕ್ಷಾಮವನ್ನು ನೀಗಿಸಿದ ಕೀರ್ತಿ ಅವರದ್ದು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಮಾತನಾಡಿ, ಬೆಂಗಳೂರಿನ ಅಭಿವೃದ್ಧಿಗೆ ಶ್ರಮಿಸಿದ ಕೆಂಪೇಗೌಡರನ್ನು ಸ್ಮರಿಸಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದೆ. ಇವರು ನೀರಾವರಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ನೀರಿನ ಸಮಸ್ಯೆಯನ್ನು ಬಗೆ ಹರಿಸಿದರು. ಮಕ್ಕಳು ಇವರ ಸಾಧನೆ, ಶ್ರಮವನ್ನು ಅರಿತುಕೊಳ್ಳಬೇಕಾಗಿದೆ ಎಂದು ಹೇಳಿದರು.

ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ನಳಿನಾದೇವಿ ಎಂ.ಆರ್. ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸೈಕಲುಗಳನ್ನು ವಿತರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಕವಿತಾ, ಆಡಳಿತ ಮಂಡಳಿಯ ಕಾರ್ಯದರ್ಶಿ ಗಣೇಶ್ ರಾವ್ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಸ್ವಾಗತಿಸಿದರು. ಶಂಕರದಾಸ್ ಚೇಂಡ್ಕಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News