ರಶ್ಯ ನಂಟಿನ ತನಿಖೆಯ ಕಿರುಕುಳದಿಂದ ಟ್ರಂಪ್ ಹತಾಶ
ವಾಶಿಂಗ್ಟನ್, ಜು. 21: ರಶ್ಯದೊಂದಿಗಿನ ನಂಟಿನ ತನಿಖೆಯೆಂಬ ನಿರಂತರ ಕಿರುಕುಳದಿಂದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತಾಶರಾಗಿದ್ದಾರೆ ಎಂದು ಶ್ವೇತಭವನ ಹೇಳಿದೆ.
‘‘ರಶ್ಯ ತನಿಖೆಯೆಂಬ ನಿರಂತರ ಕಿರುಕುಳದಿಂದ ಅಧ್ಯಕ್ಷರು ಹತಾಶರಾಗಿರುವುದು ಸ್ಪಷ್ಟವಾಗಿದೆ. ಇದಕ್ಕೊಂದು ಪೂರ್ಣವಿರಾಮ ಬೀಳುವುದನ್ನು ನೋಡಲು ಅವರು ಬಯಸುತ್ತಾರೆ. ಆಗ, ಅವರನ್ನು ಯಾವ ಉದ್ದೇಶಕ್ಕೆ ಆರಿಸಲಾಗಿದೆಯೋ ಅದರ ಬಗ್ಗೆ ಅವರಿಗೆ ಸಂಪೂರ್ಣ ಗಮನ ಕೊಡಲು ಸಾಧ್ಯವಾಗುತ್ತದೆ’’ ಎಂದು ತನ್ನ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಶ್ವೇತಭವನದ ಉಪ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ಸುದ್ದಿಗಾರರೊಂದಿಗೆ ಹೇಳಿದರು.
ಟ್ರಂಪ್‌ರ ಕುಟುಂಬ ಉದ್ಯಮದ ಹಣಕಾಸು ವ್ಯವಹಾರಗಳನ್ನು ಎಫ್‌ಬಿಐ ವಿಶೇಷ ವಕೀಲ ರಾಬರ್ಟ್ ಮುವೆಲ್ಲರ್ ಪರಿಶೀಲನೆ ನಡೆಸುತ್ತಿದ್ದಾರೆ ಎಂಬುದಾಗಿ ಗುರುವಾರ ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕದಲ್ಲಿ 2016ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯದ ಹಸ್ತಕ್ಷೇಪ ಹಾಗೂ ಟ್ರಂಪ್ ಪ್ರಚಾರ ಬಣ ಮತ್ತು ರಶ್ಯ ಸರಕಾರದ ನಡುವೆ ನಂಟು ಇದೆ ಎನ್ನುವ ಆರೋಪಗಳ ಬಗ್ಗೆ ತನಿಖೆ ನಡೆಸುವ ಹೊಣೆಯನ್ನು ಕಾನೂನು ಸಚಿವಾಲಯವು ಮುವೆಲ್ಲರ್‌ಗೆ ವಹಿಸಿದೆ.
‘‘ತಾನು ರಶ್ಯದೊಂದಿಗೆ ಯಾವುದೇ ರೀತಿಯ ಹಣಕಾಸು ವ್ಯವಹಾರಗಳನ್ನು ಹೊಂದಿಲ್ಲ ಎನ್ನುವುದನ್ನು ಅಧ್ಯಕ್ಷರು ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪ ನಡೆಸಿರುವ ಆರೋಪಗಳಿಗೆ ಮಾತ್ರ ತನಿಖೆ ಸೀಮಿತವಾಗಬೇಕು, ಅದರಾಚೆಗೆ ಹೋಗಬಾರದು ಎಂಬ ನಿಲುವನ್ನು ಟ್ರಂಪ್ ಹೊಂದಿದ್ದಾರೆ’’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸ್ಯಾಂಡರ್ಸ್ ಹೇಳಿದರು.