ಸಿರಿಯ ಬಂಡುಕೋರರಿಗೆ ಶಸ್ತ್ರ ಪೂರೈಕೆ ನಿಲ್ಲಿಸಲು ಟ್ರಂಪ್ ಕ್ರಮ
ವಾಶಿಂಗ್ಟನ್, ಜು. 21: ಸಿರಿಯದಲ್ಲಿ ಅಧ್ಯಕ್ಷ ಬಶರ್ ಅಲ್ ಅಸದ್ ಸರಕಾರವನ್ನು ಕಿತ್ತೊಗೆಯಲು ಹೋರಾಡುತ್ತಿರುವ ಸೌಮ್ಯವಾದಿ ಬಂಡುಕೋರ ಪಡೆಗಳಿಗೆ ತರಬೇತಿ ಮತ್ತು ಶಸ್ತ್ರಾಸ್ತ್ರಗಳನ್ನು ನೀಡುವ ರಹಸ್ಯ ಕಾರ್ಯಕ್ರಮವನ್ನು ನಿಲ್ಲಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ ಎಂದು ‘ವಾಶಿಂಗ್ಟನ್ ಪೋಸ್ಟ್’ನ ವರದಿಯೊಂದು ತಿಳಿಸಿದೆ.
ಇಂಥ ಒಂದು ಕ್ರಮಕ್ಕಾಗಿ ರಶ್ಯ ಬಹುದಿನಗಳಿಂದ ಬೇಡಿಕೆ ಸಲ್ಲಿಸುತ್ತಲೇ ಇದೆ. ಆದರೆ ಈ ಬಗ್ಗೆ ಟ್ರಂಪ್‌ಗೆ ನಿರ್ದಿಷ್ಟ ಮನವಿಯನ್ನು ಸಲ್ಲಿಸಲಾಗಿದೆಯೇ ಎನ್ನುವುದು ಗೊತ್ತಾಗಿಲ್ಲ.
ಟ್ರಂಪ್ ಈ ನಿರ್ಧಾರವನ್ನು ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರನ್ನು ಭೇಟಿಯಾದ ಒಂದು ತಿಂಗಳು ಮೊದಲೇ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಈ ಕಾರ್ಯಕ್ರಮವನ್ನು ಅಸಾದ್‌ರನ್ನು ಅಧಿಕಾರದಿಂದ ಹೊರಗಟ್ಟುವುದಕ್ಕಾಗಿ 2013ರಲ್ಲಿ ಅಂದಿನ ಅಧ್ಯಕ್ಷ ಬರಾಕ್ ಒಬಾಮ ಜಾರಿಗೆ ತಂದಿದ್ದರು.
ಆದರೆ, 2015ರಲ್ಲಿ ರಶ್ಯವು ಸೇನಾ ಹಸ್ತಕ್ಷೇಪ ನಡೆಸಿದ ಬಳಿಕ ಈ ಗುರಿಯು ದುರ್ಬಲಗೊಳ್ಳುತ್ತಾ ಸಾಗಿತು.
ರಶ್ಯ ಸಹಕಾರದೊಂದಿಗೆ ಸಿರಿಯ ಬಿಕ್ಕಟ್ಟಿಗೆ ಪರಿಹಾರವೊಂದನ್ನು ಕಂಡುಕೊಳ್ಳುವ ಮಹತ್ವದ ಯೋಜನೆಯೊಂದಕ್ಕೆ ಪೂರಕವಾಗಿ ಟ್ರಂಪ್ ಈ ಕ್ರಮ ತೆಗೆದುಕೊಂಡಿದ್ದಾರೆ ಎಂದು ಭಾವಿಸಲಾಗಿದೆ.