×
Ad

ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ 19 ಸಾವಿರ ಕೋಟಿ ರೂ. ಕಪ್ಪು ಹಣ ಪತ್ತೆ

Update: 2017-07-21 22:40 IST

ಹೊಸದಿಲ್ಲಿ,ಜು.21: ಜಾಗತಿಕ ಮಟ್ಟದ ಅಕ್ರಮ ಬ್ಯಾಂಕ್ ಖಾತೆಗಳ ಕುರಿತ ಮಾಹಿತಿ ಸೋರಿಕೆಯಾದ ಬಳಿಕ ನಡೆದ ತನಿಖೆಯಲ್ಲಿ ಸ್ವಿಟ್ಜರ್‌ಲ್ಯಾಂಡ್‌ನ ಎಚ್‌ಎಸ್‌ಬಿಸಿ ಸೇರಿದಂತೆ ವಿದೇಶಿ ಬ್ಯಾಂಕ್‌ಗಳಲ್ಲಿ ಭಾರತೀಯರು ಇರಿಸಿರುವ 19 ಸಾವಿರ ಕೋಟಿ ರೂ.ಗೂ ಅಧಿಕ ಕಪ್ಪುಹಣವನ್ನು ಆದಾಯ ತೆರಿಗೆ ಇಲಾಖೆ ಪತ್ತೆಹಚ್ಚಿದೆಯೆಂದು ಕೇಂದ್ರ ಸರಕಾರ ಶುಕ್ರವಾರ ಲೋಕಸಭೆಗೆ ತಿಳಿಸಿದೆ.

   ಸ್ವಿಸ್‌ಬ್ಯಾಂಕ್‌ಗಳಲ್ಲಿರುವ ಕಪ್ಪುಹಣದ ಕುರಿತ ಮಾಹಿತಿಯನ್ನು ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟವು, ತನ್ನ ಜಾಲತಾಣದಲ್ಲಿ ಬಹಿರಂಗಪಡಿಸಿದೆಯೆಂದು ವಿತ್ತ ಸಚಿವ ಅರುಣ್ ಜೇಟ್ಲಿ ಸದನಕ್ಕೆ ತಿಳಿಸಿದರು. ಸಾಗರೋತ್ತರ ಕಂಪೆನಿಗಳ ಜೊತೆ ನಂಟನ್ನು ಹೊಂದಿದ್ದರೆನ್ನಲಾದ ಸುಮಾರು 700 ಮಂದಿ ಭಾರತೀಯರು ವಿದೇಶಿ ಬ್ಯಾಂಕ್ ಖಾತೆಗಳಲ್ಲಿ ಇಟ್ಟಿರುವ 11,010 ಕೋಟಿ ರೂ.ಗೂ ಅಧಿಕ ಹಣವನ್ನು ಪತ್ತೆಹಚ್ಚಲಾಗಿದೆಯೆಂದು ಅವರು ಹೇಳಿದ್ದಾರೆ.

ಈ ಕುರಿತ 31 ಪ್ರಕರಣಗಳಿಗೆ ಸಂಬಂಧಿಸಿ ಪ್ರಾಸಿಕ್ಯೂಶನ್ 72 ದೂರುಗಳನ್ನು ಕ್ರಿಮಿನಲ್ ನ್ಯಾಯಾಲಯಗಳಲ್ಲಿ ಸಲ್ಲಿಸಿದೆಯೆಂದು ಜೇಟ್ಲಿ ತಿಳಿಸಿದರು.

ವಿದೇಶಗಳಲ್ಲಿರುವ ಭಾರತೀಯರ ಅಕ್ರಮ ಸಂಪತ್ತಿನ ಕುರಿತ ತನಿಖೆಯನ್ನು ತ್ವರಿತ ಗೊಳಿಸಲು ಕೇಂದ್ರ ಸರಕಾರವು 2016ರ ಎಪ್ರಿಲ್‌ನಲ್ಲಿ ವಿವಿಧ ತನಿಖಾಸಂಸ್ಥೆಗಳ ಅಧಿಕಾರಿಗಳನ್ನೊಳಗೊಂಡ ತಂಡವನ್ನು ರಚಿಸಿತ್ತು.

ಭಾರತ ಹಾಗೂ ಫ್ರಾನ್ಸ್ ನಡುವೆ ಏರ್ಪಟ್ಟ ಅವಳಿ ತೆರಿಗೆಗಳ್ಳತನ ವಿರುದ್ಧ ಒಡಂಬಡಿಕೆ (ಡಿಟಿಎಸಿ)ಯಡಿ ಸ್ವಿಟ್ಜರ್‌ಲ್ಯಾಂಡ್‌ನ ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ ಖಾತೆಗಳನ್ನು ಹೊಂದಿರುವ 628 ಭಾರತೀಯರ ಕುರಿತು ಸರಕಾರವು ಮಾಹಿತಿಯನ್ನು ಸಂಗ್ರಹಿಸಿರುವುದಾಗಿ ಜೇಟ್ಲಿ ಲೋಕಸಭೆಗೆ ತಿಳಿಸಿದರು.

ಈ ಪ್ರಕರಣಗಳ ತನಿಖೆಯಿಂದಾಗಿ 2017ರ ಮೇವರೆಗೆ 8437 ಕೋಟಿ ರೂ. ಮೊತ್ತದ ಅಘೋಷಿತ ಆದಾಯವನ್ನು ತೆರಿಗೆಯ ವ್ಯಾಪ್ತಿಗೆ ತರಲಾಗಿದೆಯೆಂದು ಅವರು ಹೇಳಿದರು.

ಈ ಸಂಬಂಧ 162 ಪ್ರಕರಣಗಳಲ್ಲಿ 1287 ಕೋಟಿ ರೂ. ಮೊತ್ತದ ದಂಡವನ್ನು ವಿಧಿಸಲಾಗಿದೆ ಹಾಗೂ ಇತರ 84 ಪ್ರಕರಣಗಳಲ್ಲಿ 199 ಕ್ರಿಮಿನಲ್‌ಪ್ರಾಸಿಕ್ಯೂಶನ್ ದೂರುಗಳನ್ನು ದಾಖಲಿಸಲಾಗಿದೆಯೆಂದು ಜೇಟ್ಲಿ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News