ಬಜ್ಪೆ: ಹಜ್ ಯಾತ್ರಾರ್ಥಿಗಳ ನೋಂದಣಿಗೆ ಚಾಲನೆ

Update: 2017-07-22 06:41 GMT

ಮಂಗಳೂರು, ಜು.22: ಪ್ರಸಕ್ತ ಸಾಲಿನ ಪವಿತ್ರ ಹಜ್ ನಿರ್ವಹಿಸಲು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಯಾತ್ರೆ ಹೊರಡುವ ಯಾತ್ರಾರ್ಥಿಗಳ ನೋಂದಣಿ ಕಾರ್ಯಕ್ರಮವು ಇಂದು ಬೆಳಗ್ಗೆ ಬಜ್ಪೆಯ ಹಳೆ ವಿಮಾನ ನಿಲ್ದಾಣದಲ್ಲಿ ಆರಂಭಗೊಂಡಿತು.
ಕಾರ್ಯಕ್ರಮಕ್ಕೆ ರಾಜ್ಯ ಹಜ್ ಕಮಿಟಿಯ ಸದಸ್ಯ ಕೆ.ಎಂ.ಅಬೂಬಕರ್ ಸಿದ್ದೀಕ್ ದುಆದ ಮೂಲಕ ಚಾಲನೆ ನೀಡಿದರು. ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ವೈ.ಮುಹಮ್ಮದ್ ಕುಂಞಿ ಹಾಜಿಯವರು ಯಾತ್ರಾರ್ಥಿಗಳಿಗೆ ಮೆಡಿಕಲ್ ಕಿಟ್ ಗಳನ್ನು ವಿತರಿಸಿದರು.
ಮೊದಲ ನೋಂದಣಿಯನ್ನು ಮೊಯ್ದು ಕುಂಞಿ ಪೆರುವಾಯಿ ಎಂಬವರ ಅನುಪಸ್ಥಿತಿಯಲ್ಲಿ ಅಬ್ದುಲ್ ಹಮೀದ್ ಎಂಬವರು ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಉಪಾಧ್ಯಕ್ಷ ಮೆಹಮೂದ್ ಹಾಜಿ, ಕಾರ್ಯದರ್ಶಿ ಹನೀಫ್ ಹಾಜಿ, ಅಹ್ಮದ್ ಬಾವ, ಬಶೀರ್ ಹಾಜಿ, ರಫೀಕ್ ಕೊಡಾಜೆ, ರಶೀದ್ ವಿಟ್ಲ, ಅಹ್ಮದ್ ಬಾವ ಬಜಾಲ್, ಇಬ್ರಾಹೀಂ ಕೊಣಾಜೆ, ಮಜೀದ್ ಪಿ.ಪಿ., ಸುಲೈಮಾನ್ ಹಾಜಿ ಪುತ್ತೂರು, ಎ.ಬಿ.ಬಜಾಲ್, ಕೇಂದ್ರ ಹಜ್ ಕಮಿಟಿ ಹಾಗೂ ಹಜ್ ಕ್ಯಾಂಪ್ ಉಸ್ತುವಾರಿಗಳಾದ ಝಾಕೀರ್, ಯಾಕ್ಹೂಬ್, ರಾಜ್ಯ ಹಜ್ ಸಮಿತಿಯ ಅಧಿಕಾರಿಗಳಾದ ಫೈರೋಝ್ ಪಾಶಾ, ಮಹಿಯಾರ್ ಪಾಶಾ ಮತ್ತಿತರರು ಉಪಸ್ಥಿತರಿದ್ದರು.

►ಜು.24ರಿಂದ ಹಜ್ ಯಾತ್ರೆ ಆರಂಭ

ಜು.24, 25 ಮತ್ತು 26ರಂದು ಹಜ್ ಯಾತ್ರಾರ್ಥಿಗಳ ವಿಮಾನಗಳು ಮಂಗಳೂರಿನಿಂದ ನೇರವಾಗಿ ಮದೀನಾಕ್ಕೆ ಹೊರಡಲಿದೆ. ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಜು.24ರಂದು ಪೂ.11 ಗಂಟೆಗೆ ಬಜ್ಪೆಅನ್ಸಾರ್ ಶಾಲೆಯಲ್ಲಿ ನಡೆಯಲಿದೆ.

ರಾಜ್ಯ ಹಜ್ ಸಚಿವ ಆರ್.ರೋಶನ್ ಬೇಗ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉಭಯ ಜಿಲ್ಲೆಯ ಖಾಝಿಗಳು, ಜನಪ್ರತಿನಿಧಿಗಳು, ಸಮಾಜದ ಪ್ರಮುಖರು ಭಾಗವಹಿಸಲಿದ್ದಾರೆ.

ಜು.24ರಂದು ಸಂಜೆ 4:15ಕ್ಕೆ ಹಜ್ ಯಾತ್ರಿಕರ ಮೊದಲ ತಂಡದ ಯಾನ ಹೊರಟರೆ, ಜು.25 ಮತ್ತು 26ರಂದು ಕ್ರಮವಾಗಿ ಮಧ್ಯಾಹ್ನ 12:45 ಮತ್ತು ಸಂಜೆ 4:15ಕ್ಕೆ ವಿಮಾನ ಹೊರಡಲಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News