ರೈಲ್ವೇ ಐಸಿಯುನಲ್ಲಿದ್ದು,ಚೇತರಿಸುತ್ತಿದೆ: ಸುರೇಶ್ ಪ್ರಭು
ಹೊಸದಿಲ್ಲಿ, ಜು.22: ರೈಲ್ವೇ ವ್ಯವಸ್ಥೆಯ ಆಧುನೀಕರಣಕ್ಕೆ ರೈಲ್ವೇ ಇಲಾಖೆ 8 ಲಕ್ಷ ಕೋಟಿ ರೂ.ಗಳನ್ನು ವಿನಿಯೋಗಿಸಲಿದೆ ಎಂದು ರೈಲ್ವೇ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ. ರೈಲ್ವೇ ಇಲಾಖೆ ಇನ್ನೂ ತೀವ್ರ ನಿಗಾ ಘಟಕ(ಐಸಿಯು)ದಲ್ಲಿದೆ, ಆದರೆ ಚೇತರಿಸಿಕೊಳ್ಳುತ್ತಿದೆ ಎಂದವರು ಹೇಳಿದ್ದಾರೆ. ಪ್ರಯಾಣಿಕರ ಸುರಕ್ಷಿತ ಪ್ರಯಾಣ ತಮ್ಮ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ರೈಲಿನಲ್ಲಿ ಹಿಂಸೆಯ ಘಟನೆ ನಡೆಯದಂತೆ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ರೈಲ್ವೇ ಜಾಲದ ವಿಸ್ತರಣೆ ಮತ್ತು ಆಧುನೀಕರಣದ ನಿಟ್ಟಿನಲ್ಲಿ ಸರಕಾರ ಕೆಲವು ಖಾಸಗಿ ಸಂಸ್ಥೆಗಳ ನೆರವಿನಿಂದ ಕನಿಷ್ಠ 8 ಲಕ್ಷ ಕೋಟಿ ರೂ. ಮೊತ್ತವನ್ನು ವಿನಿಯೋಗಿಸಲಿದೆ. ಲಿಫ್ಟ್ ವ್ಯವಸ್ಥೆ, ಪ್ರಯಾಣಿಕರ ಬೇಡಿಕೆಯಾಧಾರಿತ ಆಹಾರ ಪೂರೈಸುವ ವ್ಯವಸ್ಥೆ, ವೈಫೈ ಸೇರಿದಂತೆ ರೈಲುಗಳಲ್ಲಿ ಸೌಕರ್ಯಗಳನ್ನು ಸುಧಾರಿಸಲಾಗಿದೆ. ಸಿಗ್ನಲ್ ನೆಟ್‌ವರ್ಕ್ ಉನ್ನತೀಕರಣಗೊಳಿಸುವ ಜೊತೆಗೆ ರೈಲ್ವೇ ಜಾಲದ ಆಧುನೀಕರಣಕ್ಕೆ ಒತ್ತು ನೀಡಲಾಗಿದೆ.
ಸಚಿವನಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭ ಪ್ರತೀದಿನ ಕೇವಲ 3 ಕಿ.ಮೀ. ರೈಲು ಮಾರ್ಗ ನಿರ್ಮಾಣವಾಗುತ್ತಿತ್ತು. ಈಗ ಪ್ರತೀ ದಿನ 8 ಕಿ.ಮೀ. ಮಾರ್ಗ ನಿರ್ಮಿಸಲಾಗುತ್ತಿದೆ. ಸ್ವಾತಂತ್ರ ಪಡೆದ ಬಳಿಕದ 70 ವರ್ಷಗಳಲ್ಲಿ ಕೇವಲ 16,000 ಕಿ.ಮೀ.ನಷ್ಟು ಜೋಡಿ ಮಾರ್ಗ ನಿರ್ಮಿಸಲಾಗಿದೆ. ಆದರೆ ಕಳೆದ ಎರಡು ವರ್ಷಗಳಲ್ಲೇ 14,000 ಕಿ.ಮೀ. ಜೋಡಿ ಮಾರ್ಗಕ್ಕೆ ಮಂಜೂರಾತಿ ನೀಡಲಾಗಿದ್ದು ಕೆಲಸ ಪ್ರಗತಿಯಲ್ಲಿದೆ. ಮುಂದಿನ ಎರಡು ವರ್ಷದಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಸಚಿವರು ತಿಳಿಸಿದ್ದಾರೆ. ಪ್ರಯಾಣಿಕರ ರೈಲು ಸಂಚಾರದ ವೇಗವನ್ನು ಹೆಚ್ಚಿಸಲು ಮೂರು ವಿಭಿನ್ನ ಪ್ರಕ್ರಿಯೆಯ ಮೂಲಕ ರೈಲ್ವೇ ಇಲಾಖೆ ಕ್ರಮ ಕೈಗೊಳ್ಳಲಿದೆ. ಮೊದಲನೆಯದು ಸುದೀರ್ಘಾವಧಿಯ ಪರಿಕಲ್ಪನೆ. ಗಂಟೆಗೆ 500 ಕಿ.ಮೀ. ವೇಗದಲ್ಲಿ ( ಈಗ ಗಂಟೆಗೆ ಸರಾಸರಿ 50 ಕಿ.ಮೀ.ವೇಗದಲ್ಲಿ ಪ್ರಯಾಣಿಕರ ರೈಲು ಸಂಚರಿಸುತ್ತಿದೆ) ರೈಲು ಓಡುವಂತಾಗಲು ಅಗತ್ಯವಿರುವ ಆಧುನಿಕ ವ್ಯವಸ್ಥೆ ಪಡೆಯಲು ಮಾತುಕತೆ ನಡೆಯುತ್ತಿದೆ. ಇನ್ನೊಂದು ಹೈಸ್ಪೀಡ್ ರೈಲು, ಅಂದರೆ ಗಂಟೆಗೆ 350 ಕಿ.ಮೀ.ವೇಗದಲ್ಲಿ ಸಂಚರಿಸುವ ರೈಲು. ಈ ನಿಟ್ಟಿನಲ್ಲಿ ಜಪಾನ್ ನಮಗೆ ನೆರವಾಗುತ್ತಿದೆ.
ಅಲ್ಪಾವಧಿಯ ಪರಿಕಲ್ಪನೆಯಲ್ಲಿ ಸೆಮಿ ಹೈಸ್ಪೀಡ್ ರೈಲುಗಳನ್ನು ಅಳವಡಿಸುವ ಯೋಜನೆಯಿದೆ. ದಿಲ್ಲಿ- ಮುಂಬೈ, ದಿಲ್ಲಿ-ಕೋಲ್ಕತಾ ಮಧ್ಯೆ ಸಂಚರಿಸುವ ರೈಲುಗಳ ವೇಗವನ್ನು ಗಂಟೆಗೆ ಸರಾಸರಿ 160 ಕಿ.ಮೀ.ಗೆ ಹೆಚ್ಚಿಸಲಾಗುವುದು. ಈ ರೈಲು ಮಾರ್ಗಗಳನ್ನು ಉನ್ನತೀಕರಿಸುವ 18,000 ಕೋಟಿ ರೂ.ವೆಚ್ಚದ ಯೋಜನೆಗೆ ನೀತಿ ಆಯೋಗದ ಅನುಮೋದನೆ ದೊರೆತಿದ್ದು ಶೀಘ್ರ ಸಚಿವ ಸಂಪುಟದ ಸಭೆಯಲ್ಲಿ ಯೋಜನೆಯನ್ನು ಮಂಡಿಸಲಾಗುವುದು. ಹೀಗೆ ಮಾಡಲೇಬೇಕಾಗಿದೆ. ಇಲ್ಲದಿದ್ದರೆ ಹೆಚ್ಚು ಪಾವತಿಸುವ ಸಾಮರ್ಥ್ಯವಿರುವ ಜನರು ವಿಮಾನ ಪ್ರಯಾಣದ ಬಗ್ಗೆ ಒಲವು ತೋರಬಹುದು ಎಂದು ಸಚಿವರು ಹೇಳಿದರು. 2022ರ ವೇಳೆಗೆ ಭಾರತದಲ್ಲಿ ಮೊತ್ತಮೊದಲ ಬುಲೆಟ್ ರೈಲು ಮುಂಬೈ-ಅಹಮದಾಬಾದ್ ಮಧ್ಯೆ ಸಂಚರಿಸಲಿದೆ. ಈ ಯೋಜನೆಗೆ ಜಪಾನ್ 80,000 ಕೋಟಿ ರೂ. ನೆರವು ನೀಡಿದೆ.
50 ವರ್ಷಾವಧಿಯ ಈ ಸಾಲಕ್ಕೆ ಶೇ.0.1ರಷ್ಟು ಬಡ್ಡಿದರವಿದೆ. ಇದುವರೆಗೆ ಇಷ್ಟೊಂದು ಕಡಿಮೆ ಬಡ್ಡಿದರದಲ್ಲಿ ಸಾಲ ಸಿಕ್ಕಿರಲಿಲ್ಲ. ಅಲ್ಲದೆ ಈ ಯೋಜನೆಗೆ ಸಂಬಂಧಿಸಿದ ಇತರ ಭಾಗಕ್ಕೆ ಶೇ.15ರಷ್ಟು ಬಡ್ಡಿದರವಿದೆ. ಎಲ್ಲವೂ ಸಿದ್ಧವಾಗಿರುವಾಗ ಯೋಜನೆಯನ್ನು ನಿಗದಿತ ಸಮಯ ಮಿತಿಯೊಳಗೆ ಪೂರೈಸಬಲ್ಲೆವು ಎಂಬ ವಿಶ್ವಾಸವಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಪಘಾತದ ಹಿನ್ನೆಲೆಯಲ್ಲಿ, ಪ್ರಯಾಣಿಕರ ಸುರಕ್ಷಿತ ಪ್ರಯಾಣದ ಬಗ್ಗೆ ಇಲಾಖೆ ಹೆಚ್ಚಿನ ಆದ್ಯತೆ ನೀಡಿದೆ. ಸುರಕ್ಷಾ ಮಾನದಂಡವನ್ನು ಸುಧಾರಿಸಲು ಮುಂದಿನ ಐದು ವರ್ಷಗಳಲ್ಲಿ 1 ಲಕ್ಷ ಕೋಟಿ ರೂ. ಮೊತ್ತದ ಯೋಜನೆಯನ್ನು ರೂಪಿಸಲಾಗಿದೆ ಎಂದು ಸಚಿವರು ತಿಳಿಸಿದರು. 1 ಲಕ್ಷ ಕೋಟಿ ರೂ. ವೆಚ್ಚದಲ್ಲಿ ದೇಶದ ಸುಮಾರು 400 ನಿಲ್ದಾಣಗಳನ್ನು ಮರು ರೂಪಿಸುವ ಯೋಜನೆಯಿದೆ.
ಜಮ್ಮು ರೈಲು ನಿಲ್ದಾಣ ಮರುರೂಪಿಸುವ ಯೋಜನೆಗೆ ಟೆಂಡರ್ ಕರೆದು ಬಿಡ್ ನಿರ್ಣಯಿಸಲಾಗಿದೆ. ಶೀಘ್ರದಲ್ಲೇ ಕೋಝಿಕೋಡ್ ನಿಲ್ದಾಣದ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಮೂರು ವಿಧದಲ್ಲಿ ರೈಲು ನಿಲ್ದಾಣ ಮರು ರೂಪಿಸುವ ಪ್ರಕ್ರಿಯೆ ನಡೆಯಲಿದೆ. ಮೊಲನೆಯದು- ಸರಕಾರದಿಂದ ಸರಕಾರದ ಮಟ್ಟ. ಇಲ್ಲಿ ಮಲೇಶ್ಯಾ, ಜಪಾನ್, ಸಿಂಗಾಪುರ, ಬೆಲ್ಜಿಯಂ, ಜರ್ಮನಿ, ಬ್ರಿಟನ್ ಮುಂತಾದ ರಾಷ್ಟ್ರಗಳೊಡನೆ ಮಾತುಕತೆ ಸಾಗಿದೆ. ಸುಮಾರು 50 ನಿಲ್ದಾಣಗಳನ್ನು ಮರು ರೂಪಿಸಲಾಗುತ್ತದೆ.
ಎರಡನೆಯದು ನಮ್ಮ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳ ನೆರವು ಪಡೆಯುವುದು. ಇಲ್ಲಿ ಎನ್‌ಬಿಸಿಸಿ, ಮುಂಬೈ ರೈಲ್ ವಿಕಾಸ ನಿಗಮ, ರಾಜ್ಯ ಸರಕಾರದ ಅಧೀನದ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತವೆ. ಎನ್‌ಬಿಸಿಸಿಗೆ 10 ನಿಲ್ದಾಣದ ಉನ್ನತೀಕರಣದ ಹೊಣೆ ವಹಿಸಲು ಈಗಾಗಲೇ ನಿರ್ಧರಿಸಲಾಗಿದೆ. ಮೂರನೆಯದ್ದು ಸಾರ್ವಜನಿಕ-ಖಾಸಗಿ ಸಹಭಾಗಿತ್ವ. ಇಲ್ಲಿ 23 ರೈಲು ನಿಲ್ದಾಣಕ್ಕೆ ಟೆಂಡರ್ ಕರೆಯಲಾಗಿದೆ.
ಹೀಗೆ ಮಾಡುವುದರಿಂದ ವಾಣಿಜ್ಯಕ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ. ವಿಶ್ವದ ಯಾವುದೇ ರೈಲ್ವೇ ವ್ಯವಸ್ಥೆಯೂ ಕೇವಲ ಪ್ರಯಾಣಿಕರ ಮತ್ತು ಸರಕು ಸಾಗಾಟದ ಆದಾಯವನ್ನು ಅವಲಂಬಿಸಿಲ್ಲ. ವಿಶ್ವದಾದ್ಯಂತ ರೈಲ್ವೇ ವ್ಯವಸ್ಥೆಯಲ್ಲಿ ಸರಾಸರಿ ಶೇ.20ರಷ್ಟು ಆದಾಯ ವಾಣಿಜ್ಯಕ ರೂಪದಲ್ಲಿ ಬರುತ್ತಿದೆ. ಭಾರತದಲ್ಲೂ ಇದೇ ರೀತಿ ಆಗಬೇಕೆನ್ನುವುದು ನಮ್ಮ ಇರಾದೆಯಾಗಿದೆ. ರೈಲ್ವೇ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಬೇಕು. ರೈಲ್ವೇ ವ್ಯವಸ್ಥೆ ಸುಧಾರಿಸಿದರೆ ಮಾತ್ರ ಇದು ಸಾಧ್ಯ ಎಂಬುದು ಸರಕಾರಕ್ಕೆ ತಿಳಿದಿದೆ. ಈ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.
ಉದ್ಯಮ ಸಂಪನ್ಮೂಲ ಯೋಜನೆ ಕಾರ್ಯಕ್ರಮ
ಉದ್ಯಮ ಸಂಪನ್ಮೂಲ ಯೋಜನೆ ಕಾರ್ಯಕ್ರಮ (ಇಆರ್‌ಪಿ)ವನ್ನು ಆರಂಭಿಸಿದ್ದೇವೆ. ರೈಲ್ವೇ ಇಲಾಖೆಯ ಬೃಹತ್ ಮಾನವ ಸಂಪನ್ಮೂಲದ ದಕ್ಷ ನಿರ್ವಹಣೆ ಹಾಗೂ ಇಲಾಖೆಯ ಸರಕು ಸಾಗಣೆ, ಪ್ರಯಾಣಿಕರ ಸಂಚಾರ ಮತ್ತು ಆಡಳಿತಾತ್ಮಕ ಕಾರ್ಯನಿರ್ವಹಣೆಯನ್ನು ಸಂಯೋಜಿಸಲು ಈ ಉಪಕ್ರಮ ಆರಂಭಿಸಲಾಗಿದೆ. ಇದರ ಮೂಲಕ ನಿಮ್ಮ ಕೋಣೆಯಲ್ಲಿ ಕುಳಿತುಕೊಂಡೇ ಸಂಪೂರ್ಣ ರೈಲ್ವೇ ಜಾಲದ ಕಾರ್ಯನಿರ್ವಹಣೆಯನ್ನು ಗಮನಿಸಬಹುದಾಗಿದೆ. ಇದರ ಮೂಲಕ ರೈಲ್ವೇ ಮಾರ್ಗವನ್ನು ಸಮರ್ಪಕವಾಗಿ ಬಳಸಬಹುದಾಗಿದೆ. ಅಲ್ಲದೆ ಸಿಬ್ಬಂದಿಗಳ ಉತ್ಪಾದನಾ ಸಾಮರ್ಥ್ಯ ಕೂಡಾ ಹೆಚ್ಚಲಿದೆ. ಅಲ್ಲದೆ ಲಾಭದಾಯಕ ಮಾರ್ಗಗಳು ಯಾವುದು ಎಂಬುದನ್ನು ಸುಲಭದಲ್ಲಿ ನಿರ್ಧರಿಸಬಹುದಾಗಿದೆ.