×
Ad

ಅಮೆರಿಕ ಮಧ್ಯಪ್ರವೇಶಿಸಿದರೆ ಕಾಶ್ಮೀರ ಸಿರಿಯ ಆದೀತು : ಮೆಹಬೂಬ ಮುಫ್ತಿ

Update: 2017-07-22 21:25 IST

 ಶ್ರೀನಗರ, ಜು.22: ಕಾಶ್ಮೀರದ ವಿಷಯದಲ್ಲಿ ಅಮೆರಿಕ ಮಧ್ಯಪ್ರವೇಶಿಸಿದರೆ ಕಣಿವೆ ರಾಜ್ಯದ ಪರಿಸ್ಥಿತಿ ಸಿರಿಯ ಮತ್ತು ಅಪಘಾನಿಸ್ತಾನದಂತೆ ಆದೀತು ಎಂದು ಎಚ್ಚರಿಸಿರುವ ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ಚೀನಾ ಮತ್ತು ಅಮೆರಿಕ ಮತ್ತೊಂದು ದೇಶದ ಆಂತರಿಕ ವ್ಯವಹಾರದಲ್ಲಿ ಮೂಗು ತೂರಿಸುವುದು ಬೇಡ. ತಮ್ಮ ಕೆಲಸವನ್ನು ನೋಡಿಕೊಂಡಿರಲಿ ಎಂದು ಕಟುವಾಗಿ ಹೇಳಿದ್ದಾರೆ.

  ಚೀನ, ಅಮೆರಿಕ ಮುಂತಾದ ಮೂರನೇ ರಾಷ್ಟ್ರಗಳು ಕಾಶ್ಮೀರ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು . ಅಥವಾ ವಿಶ್ವದಾದ್ಯಂತ ಭಾರತಕ್ಕೆ ಹಲವು ಮಿತ್ರರಾಷ್ಟ್ರಗಳಿವೆ. ಇವುಗಳಲ್ಲಿ ಯಾವುದಾದರೂ ಒಂದು ರಾಷ್ಟ್ರವನ್ನು ಮಧ್ಯಸ್ತಿಕೆಗೆ ಆಹ್ವಾನಿಸಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ) ಪಕ್ಷದ ಅಧ್ಯಕ್ಷ ಫಾರುಕ್ ಅಬ್ದುಲ್ಲರ ಹೇಳಿಕೆಯನ್ನು ಮೆಹಬೂಬ ಮುಫ್ತಿ ಖಂಡಿಸಿದರು.

 ಲಾಹೋರ್ ಸಭೆಯಲ್ಲಿ ಮಾಜಿ ಪ್ರಧಾನಿ ವಾಜಪೇಯಿಯವರು ಹೇಳಿದಂತೆ ಕಾಶ್ಮೀರ ಸಮಸ್ಯೆ ಪರಿಹರಿಸಲು ಭಾರತ-ಪಾಕ್ ಮಧ್ಯೆ ಮಾತುಕತೆ ನಡೆಯಬೇಕು ಎಂದ ಅವರು, ಸಿರಿಯ ಮತ್ತು ಅಪಘಾನಿಸ್ತಾನದಲ್ಲಿ ಏನಾಗಿದೆ ಎಂಬುದು ಫಾರೂಕ್‌ರಿಗೆ ತಿಳಿದಿದೆಯೇ ಎಂದು ಪ್ರಶ್ನಿಸಿದರು.

ಎಷ್ಟು ಕಾಲ ನಿಮಗೆ ಕಾಯಲು ಸಾಧ್ಯ. ಕೆಲವೊಮ್ಮೆ ಗೂಳಿಯ ಕೊಂಬನ್ನು ಹಿಡಿದು ಎಳೆಯಬೇಕಾಗುತ್ತದೆ. ಭಾರತಕ್ಕೆ ವಿಶ್ವದೆಲ್ಲೆಡೆ ಮಿತ್ರರಿದ್ದಾರೆ. ಅವರನ್ನು ಮಧ್ಯಸ್ತಿಕೆ ವಹಿಸಲು ಕೇಳಿಕೊಳ್ಳಬೇಕು. ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಇಚ್ಛಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಕಾಶ್ಮೀರ ವಿಷಯದಲ್ಲಿ ಮಧ್ಯಸ್ತಿಕೆಗೆ ಸಿದ್ಧ ಎಂದು ಚೀನಾ ಕೂಡಾ ಹೇಳಿದೆ. ಯಾರಾದರೊಬ್ಬರನ್ನು ಸಂಪರ್ಕಿಸಬೇಕಿದೆ ಎಂದು ಫಾರುಕ್ ಅಬ್ದುಲ್ಲಾ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News