ಎಎಸ್‌ಐ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

Update: 2017-07-22 18:34 GMT

ಮಂಗಳೂರು, ಜು. 22 : ಪಣಂಬೂರು ಠಾಣಾ ಎಎಸ್‌ಐ ಪುರಂದರ ಗೌಡ ಮತ್ತು ಕಾನ್‌ಸ್ಟೇಬಲ್ ಸತೀಶ್ ಅವರ ಮೇಲೆ ಜು.19ರಂದು ಕಾರು ಚಲಾಯಿಸಿ ಕೊಲೆ ಮಾಡಲು ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಪಣಂಬೂರು ಠಾಣಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗ್ರೆಯ ಹಾರಿಸ್ ಯಾನೆ ಚಂದು ಹಾರೀಸ್(26), ಕಸ್ಬಾ ಬೆಂಗ್ರೆಯ ಮೊಯ್ದಿನ್ ಆದಿಲ್ ಯಾನೆ ಆದಿಲ್(20) ಮತ್ತು 17 ವರ್ಷದ ಬಾಲಕ ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ.

ರೌಡಿ ಶೀಟರ್‌ ಪ್ರಕರಣದ ಪ್ರಮುಖ ಆರೋಪಿ ಹಾರಿಸ್ ರೌಡಿ ಶೀಟರ್ ಆಗಿದ್ದು, ಈತನ ಮೇಲೆ ಕಳ್ಳತನ, ದರೋಡೆ ಸಹಿತ ವಿವಿಧ ಪೊಲೀಸ್ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬಂಧಿತ ಆರೋಪಿಗಳಿಂದ ಒಂದು ಕೆ.ಜಿ.ಗಾಂಜಾ ಮತ್ತು 7 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದರೋಡೆಗೆ ಸಂಚು ರೂಪಿಸಿದ್ದ ಹಾರಿಸ್‌ನನ್ನು ಶುಕ್ರವಾರ ಬಂಧಿಸಲು ಪೊಲೀಸರು ಬೆಂಗ್ರೆಗೆ ತೆರಳಿದ್ದ ಸಂದರ್ಭದಲ್ಲಿ ಪೊಲೀಸರನ್ನು ಕಂಡ ಹಾರಿಸ್ ಅವರ ಮೇಲೆಯೇ ಕಾರು ಚಲಾಯಿಸಿ ಕೊಲೆಗೆ ಯತ್ನಿಸಿದ್ದರು. ಈ ಸಂದರ್ಭದಲ್ಲಿ ಎಎಸ್‌ಐ ಪುರಂದರ ಗೌಡ ಮತ್ತು ಕಾನ್‌ಸ್ಟೇಬಲ್ ಅಪಾಯದಿಂದ ಪಾರಾಗಿದ್ದರು.

ಕೂಡಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪಣಂಬೂರು ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ರಫೀಕ್ ಕೆ.ಎಂ. ಅವರ ನೇತೃತ್ವದ ತಂಡ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News