“6 ತಿಂಗಳೊಳಗೆ ಇಸ್ಲಾಂ ಧರ್ಮ ಸ್ವೀಕರಿಸದಿದ್ದರೆ ಕೊಲ್ಲುತ್ತೇವೆ”: ಮಲಯಾಳಂ ಲೇಖಕನಿಗೆ ಬೆದರಿಕೆ ಹಾಕಿದ ದುಷ್ಕರ್ಮಿಗಳು
ಕೇರಳ, ಜು.23: "ಆರು ತಿಂಗಳೊಳಗಾಗಿ ಇಸ್ಲಾಮ್ ಧರ್ಮಕ್ಕೆ ಮತಾಂತರವಾಗದಿದ್ದಲ್ಲಿ ಕೈ ಹಾಗೂ ಕಾಲನ್ನು ಕಡಿದು ನಿಮ್ಮನ್ನು ಕೊಲೆಗೈಯಲಾಗುವುದು" ಎಂದು ಮಲಯಾಳಂನ ಖ್ಯಾತ ಲೇಖಕ ಕೆ.ಪಿ. ರಾಮನುಣ್ಣಿಯವರಿಗೆ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ,
ಧರ್ಮದ ಹೆಸರಿನಲ್ಲಿ ಮೂಲಭೂತವಾದಿಗಳು ಕಚ್ಚಾಡುವುದನ್ನು ನಿಲ್ಲಿಸಬೇಕು ಎಂಬ ಬಗ್ಗೆ ಲೇಖನವೊಂದನ್ನು ರಾಮನುಣ್ಣಿಯವರು ಪತ್ರಿಕೆಯೊಂದಕ್ಕೆ ಬರೆದಿದ್ದು, ಆನಂತರ ಬೆದರಿಕೆ ಪತ್ರ ಬಂದಿದೆ ಎನ್ನಲಾಗಿದೆ,
“ಟಿ.ಜೆ. ಜೋಸೆಫ್ ನಂತೆ ನಿಮ್ಮ ಬಲಕೈಯನ್ನು ಕತ್ತರಿಸಲಾಗುವುದು. ನಿಮ್ಮ ಎಡಕಾಲನ್ನೂ ಕತ್ತರಿಸಲಾಗುವುದು. ಇಸ್ಲಾಂ ಧರ್ಮ ಸ್ವೀಕರಿಸಲು ನಿಮಗೆ 6 ತಿಂಗಳ ಕಾಲಾವಕಾಶ ನೀಡಲಾಗಿದೆ” ಎಂದು ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ರಾಮನುಣ್ಣಿ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.
“ಸಾಮಾಜಿಕ ಜಾಲತಾಣಗಳಲ್ಲಿ ಕೊಲೆ ಹಾಗೂ ದಾಳಿ ನಡೆಸುವ ಬೆದರಿಕೆಯೊಡ್ಡುವ ವ್ಯಕ್ತಿಗಳನ್ನು ನಾವು ಸಹಿಸುವುದಿಲ್ಲ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.