ಇವಿಎಂ ದೋಷಪೂರ್ಣ: ಪಕ್ಷೇತರ ಅಭ್ಯರ್ಥಿಗೆ ಒತ್ತಿದ್ದ ಮತ ಬಿಜೆಪಿ ಅಭ್ಯರ್ಥಿಗೆ
ಮುಂಬೈ, ಜು.23: ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳು ದೋಷಪೂರಿತವಾಗಿವೆ ಎನ್ನುವುದನ್ನು ಮಹಾರಾಷ್ಟ್ರದ ಬುಲ್ಢಾಣಾ ಜಿಲ್ಲಾಧಿಕಾರಿ ಕಚೇರಿಯು ಆರ್‌ಟಿಐ ಉತ್ತರವೊಂದರಲ್ಲಿ ದೃಢಪಡಿಸಿದೆ. ಇದು ಇವಿಎಂಗಳಲ್ಲಿ ಯಾವುದೇ ಹಸ್ತಕ್ಷೇಪ ಸಾಧ್ಯವಿಲ್ಲ ಎಂಬ ಚುನಾವಣಾ ಆಯೋಗದ ಪ್ರತಿಪಾದನೆಗೆ ವ್ಯತಿರಿಕ್ತವಾಗಿದೆ.
2017,ಫೆ.16ರಂದು ಬುಲ್ಢಾಣಾ ಜಿಲ್ಲಾ ಪರಿಷತ್‌ಗೆ ಚುನಾವಣೆ ನಡೆದಿದ್ದು, ಲೋನಾರ್ ಪಟ್ಟಣದ ಸುಲ್ತಾನಪುರದ ಮತಗಟ್ಟೆ ಸಂಖ್ಯೆ 56ರಲ್ಲಿ ಈ ಇವಿಎಂ ವಂಚನೆ ನಡೆದಿತ್ತು ಎಂದು ಆರ್‌ಟಿಐ ಕಾರ್ಯಕರ್ತ ಅನಿಲ್ ಗಲಗಲಿ ಅವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಆಶಾ ಅರುಣ ರೆರೆ ಅವರಿಗೆ ತೆಂಗಿನಕಾಯಿಯ ಚಿಹ್ನೆಯನ್ನು ನೀಡಲಾಗಿತ್ತು. ಮತದಾರರು ಇವಿಎಮ್‌ನಲ್ಲಿ ಪ್ರತಿಬಾರಿ ತೆಂಗಿನಕಾಯಿ ಚಿಹ್ನೆಯ ಗುಂಡಿಯನ್ನು ಒತ್ತಿದಾಗಲೂ ಬಿಜೆಪಿಯ ಚುನಾವಣಾ ಚಿಹ್ನೆಯಾದ ಕಮಲದ ಎದುರಿನ ಮಿಂಚುದೀಪ ಬೆಳಗುತ್ತಿತ್ತು. ಅಂದರೆ ಪಕ್ಷೇತರ ಅಭ್ಯರ್ಥಿಗೆ ಒತ್ತಿದ್ದ ಮತ ಬಿಜೆಪಿ ಅಭ್ಯರ್ಥಿಗೆ ಹೋಗುತ್ತಿತ್ತು. ಚುನಾವಣಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದ ತನ್ನ ತನಿಖಾ ವರದಿಯಲ್ಲಿ ಇದನ್ನು ಸ್ಪಷ್ಟಪಡಿಸಿದ್ದರು ಮತ್ತು ಈ ವಿವರಗಳು ಆರ್‌ಟಿಐ ಅರ್ಜಿಗೆ ಉತ್ತರದಲ್ಲಿ ಲಭ್ಯವಾಗಿವೆ ಎಂದು ಗಲಗಲಿ ಹೇಳಿದ್ದಾರೆ.
ರೆರೆ ಅವರ ದೂರು ನೀಡಿದ್ದ ಬಗ್ಗೆ ಮಾಹಿತಿ ಪಡೆದ ಗಲಗಲಿ ಜೂ.16ರಂದು ಬುಲ್ಢಾಣಾ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ವಿಭಾಗಕ್ಕೆ ಮಾಹಿತಿ ಹಕ್ಕು ಕಾಯ್ದೆ ಯಡಿ ಅರ್ಜಿ ಸಲ್ಲಿಸಿ ಚುನಾವಣಾಧಿಕಾರಿಯು ಸಲ್ಲಿಸಿದ್ದ ತನಿಖಾ ವರದಿಯಲ್ಲಿನ ವಿವರಗಳನ್ನು ಕೇಳಿದ್ದರು.